130 ಟನ್ ಯುರೇನಿಯಂ ಖರೀದಿಸಲಿರುವ ಇರಾನ್
ಟೆಹರಾನ್, ಜ. 13: 130 ಟನ್ ನೈಸರ್ಗಿಕ ಯುರೇನಿಯಂ ಆಮದು ಮಾಡಿಕೊಳ್ಳಲು ಇರಾನ್‌ಗೆ ಜಾಗತಿಕ ಶಕ್ತ ರಾಷ್ಟ್ರಗಳ ಅನುಮತಿ ದೊರೆತಿದೆ ಎಂದು ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ವಕ್ತಾರ ಬೆಹ್ರೂಝ್ ಕಮಲ್ವಂಡಿ ಗುರುವಾರ ಹೇಳಿದ್ದಾರೆ.
ಇರಾನ್ 2015ರಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ, ರಶ್ಯ ಮತ್ತು ಅಮೆರಿಕಗಳೊಂದಿಗೆ ನಡೆಸಿದ ಪರಮಾಣು ಒಪ್ಪಂದದ ಮೇಲುಸ್ತುವಾರಿ ನಡೆಸುತ್ತಿರುವ ಜಂಟಿ ಆಯೋಗದಿಂದ ಹಸಿರು ನಿಶಾನೆ ಲಭಿಸಿದೆ ಎಂದರು ಅವರು ತಿಳಿಸಿದರು.
‘‘130 ಟನ್ ನೈಸರ್ಗಿಕ ಯುರೇನಿಯಂ ಖರೀದಿಸುವ ನಮ್ಮ ಮನವಿಯನ್ನು ಅವರು ಸ್ವೀಕರಿಸಿದ್ದಾರೆ’’ ಎಂದು ಸರಕಾರಿ ಟೆಲಿವಿಶನ್‌ಗೆ ಕಮಲ್ವಂಡಿ ತಿಳಿಸಿದರು.
ಆದರೆ, ಯುರೇನಿಯಂನ ಪೂರೈಕೆದಾರರು ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಲಿಲ್ಲ.
ಪರಮಾಣು ಒಪ್ಪಂದವು 2016 ಜನವರಿಯಲ್ಲಿ ಜಾರಿಗೆ ಬಂದಂದಿನಿಂದ ಇರಾನ್ 220 ಟನ್ ಯುರೇನಿಯಂನ್ನು ಈಗಾಗಲೇ ಆಮದು ಮಾಡಿಕೊಂಡಿದೆ ಎಂದರು.
ಆದರೆ, ಇರಾನ್‌ಗೆ ತನ್ನ ಪರಮಾಣು ಕಾರ್ಯಕ್ರಮವನ್ನು ‘ಕೈಗಾರಿಕಾ’ ಮಟ್ಟಕ್ಕೆ ಏರಿಸಲು ಬೃಹತ್ ಯುರೇನಿಯಂ ಸಂಗ್ರಹದ ಅಗತ್ಯವಿದೆ ಎಂದು ಹೇಳಿದ ಅವರು, ದೇಶಾದ್ಯಂತ ನೂತನ ಯುರೇನಿಯಂ ಗಣಿಗಳ ಶೋಧ ಕಾರ್ಯ ಚಾಲ್ತಿಯಲ್ಲಿದೆ ಎಂದರು.