ಕ್ಯಾಂಪಸ್ ಫ್ರಂಟ್ ನಿಂದ ನಜೀಬ್ ಪತ್ತೆಗೆ ಆಗ್ರಹಿಸಿ ಮಾನವ ಸರಪಳಿ
ಮಂಗಳೂರು , ಜ.13 : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ಹಮ್ಮಿಕೊಂಡಿರುವ 'ದೇಶವು ನಜೀಬ್ ನನ್ನು ಕೇಳುತ್ತಿದೆ, ಗೌರವಾನ್ವಿತ ಪ್ರಧಾನ ಮಂತ್ರಿಯವರೇ ಉತ್ತರಿಸಿ' ಎಂಬ ಅಭಿಯಾನದ ಅಂಗವಾಗಿ ದ.ಕ ಜಿಲ್ಲಾ ಸಮಿತಿಯ ಪ್ರತಿಭಟನಾ ಪ್ರದರ್ಶನವು ಇಂದು ಸಂಜೆ ಜ್ಯೋತಿ ವೃತ್ತದ ಬಳಿ ವಿದ್ಯಾರ್ಥಿ ಸರಪಳಿ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ನಂತರ ವಿದ್ಯಾರ್ಥಿಗಳು ನಜೀಬ್ ನ ನ್ಯಾಯಕ್ಕಾಗಿ ಘೋಷಣೆ ಕೂಗಿದರು.
ಸಭೆಯಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ತುಫೈಲ್ ಮಾತನಾಡಿ , ಜೆ.ಎನ್. ಯು ವಿದ್ಯಾರ್ಥಿ ನಜೀಬ್ ಕಾಣೆಯಾಗಿ 90 ದಿನಗಳಾದರೂ ಸರ್ಕಾರ ಹಾಗೂ ದೆಹಲಿ ಪೋಲಿಸರು ಆರೋಪಿಗಳನ್ನು ಪತ್ತೆಹಚ್ಚವಲ್ಲಿ ವಿಫಲವಾಗಿದ್ದಾರೆ ಹಾಗೂ ಕೇಂದ್ರ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶ್ರೀಘ್ರವಾಗಿ ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಇಲ್ಲದಿದ್ದರೆ ಇದರ ವಿರುದ್ಧ ರಾಷ್ಟ್ರಾದ್ಯಂತ ಆಂದೋಲನವನ್ನು ನಡೆಸಲಿದ್ದೇವೆ ಎಂಬ ಮುನ್ನಚ್ಚರಿಕೆಯನ್ನು ನೀಡಿದರು.
ದ.ಕ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಮುಖಂಡರಾದ ಮುಹಮ್ಮದ್ ಇಮ್ರಾನ್ , ರಿಯಾಝ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಸದಸ್ಯ ತಾಜುದ್ದೀನ್ ಸ್ವಾಗತಿಸಿದರು.
ಇಮ್ರಾನ್ ನಿರೂಪಿಸಿ ವಂದಿಸಿದರು.