×
Ad

ಗಿನ್ನೆಸ್ ವಿಶ್ವ ದಾಖಲೆಗೆ ಕೆಎಂಸಿ ಆಸ್ಪತ್ರೆ ಹೆಸರು ಸೇರ್ಪಡೆ

Update: 2017-01-13 21:24 IST

ಮಣಿಪಾಲ, ಜ.13: ಕಳೆದ ವರ್ಷದ ಅ.15ರಂದು ನಡೆದ ಕೈಗಳ ನೈರ್ಮಲ್ಯ ರಿಲೇಗಾಗಿ ಮಣಿಪಾಲ ವಿಶ್ವವಿದ್ಯಾಲಯದ ಕಸ್ತೂರ್‌ಬಾ ಆಸ್ಪತ್ರೆಯ ಹೆಸರು ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ.

ಜಾಗತಿಕ ಕೈತೊಳೆಯುವ ದಿನದ ಅಂಗವಾಗಿ ಏರ್ಪಡಿಸಲಾದ ಈ ರಿಲೇಯಲ್ಲಿ ಮಣಿಪಾಲ ವಿವಿ ಹಾಗೂ ಕೆಎಂಸಿಯ 3,500 ಮಂದಿ ಪಾಲ್ಗೊಂಡಿದ್ದರು. ಇದಕ್ಕಿಂತ ಮುಂಚಿನ ದಾಖಲೆ ಹೊಸದಿಲ್ಲಿಯ ಇಂದ್ರಪ್ರಸ್ಥ ದ ಅಪೊಲೊ ಆಸ್ಪತ್ರೆಯ ಹೆಸರಿನಲ್ಲಿದ್ದು, ಇದರಲ್ಲಿ 1711 ಮಂದಿ ಪಾಲ್ಗೊಂಡಿದ್ದರು.

ಕೆಎಂಸಿಯ ವಿಶ್ವ ದಾಖಲೆಯ ಈ ಮಹಾಅಭಿಯಾನ ಬೆಳಗ್ಗೆ 7:00ಗಂಟೆಗೆ ಪ್ರಾರಂಭಗೊಂಡು ಸರಿಸುಮಾರು ಅದೇ ದಿನ ಮಧ್ಯರಾತ್ರಿಯ ವೇಳೆಗೆ ಕೊನೆಗೊಂಡಿತ್ತು. ಹೆಚ್ಚು ಕಡಿಮೆ 5000 ಮಂದಿ ಬೋಧಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಿಕೊಂಡಿದ್ದರು. ಕೊನೆಗೆ ಇದಕ್ಕೆ ಮಂಗಳ ಹಾಡಿದಾಗ 3422 ಮಂದಿ ಕೈಗಳನ್ನು ತೊಳೆಯುವ ಕೆಲಸವನ್ನು ಮುಗಿಸಿದ್ದರು. ಅಲ್ಲದೇ ದಾಖಲೆಗಾಗಿ ಗಿನ್ನೆಸ್ ಸಂಸ್ಥೆ ಇದೇ ಸಂಖ್ಯೆಯನ್ನು ಅನುಮೋದಿಸಿತ್ತು.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಕಳೆದ ವಾರ 3422 ಪ್ರಮಾಣಪತ್ರಗಳನ್ನು ಪಡೆಯಲಾಗಿತ್ತು. ಈ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಇಂದು ಅಧಿಕೃತವಾಗಿ ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಅವರು ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಡಾ. (ಕರ್ನಲ್) ಎಂ.ದಯಾನಂದ್ ಅವರಿಗೆ ಹಸ್ತಾಂತರಿಸಿದರು.

ಮಣಿಪಾಲ ವಿವಿಯ ಕುಲಪತಿ ಡಾ.ಎಚ್.ವಿನೋದ್ ಭಟ್ ಹಾಗೂ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಶ್ವದಾಖಲೆಗಾಗಿ ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದ ಜಾಗಿಂಗ್ ಟ್ರಾಕ್‌ನ್ನು ಆಯ್ಕೆ ಮಾಡಲಾಗಿತ್ತು. ಹೊರಗಿನಿಂದ ಬಂದ ತೀರ್ಪುಗಾರರು ಇದರ ಮೇಲ್ವಿಚಾರಣೆ ನಡೆಸಿದ್ದರು. ಕೈ ತೊಳೆಯುವ ರಿಲೇ ಮುಕ್ತಾಯಗೊಂಡ ಬಳಿಕ ಇದರ ವಿವರಗಳನ್ನು ಲಂಡನ್‌ನಲ್ಲಿರುವ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಗೆ ಕಳುಹಿಸಿಕೊಡಲಾಯಿತು. ಅಲ್ಲಿನ ತಾಂತ್ರಿಕ ತಂಡ ಇದರಲ ಮೌಲ್ಯಮಾಪನ ಮಾಡಿದ ಬಳಿಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ, ಮಣಿಪಾಲ ವಿವಿಯ ಘಟಕವಾಗಿರುವ ಕೆಎಂಸಿ ಆಸ್ಪತ್ರೆಯನ್ನು ‘ವಿಶ್ವದಾಖಲೆಯ ಅಧಿಕೃತ ವಾರಸುದಾರ’ ಎಂದು ಘೋಷಿಸಿತು.


‘ನಮ್ಮ ಕೈಗಳ ನೈರ್ಮಲ್ಯದ ಕಾಳಜಿ ವಹಿಸುವ ಸಂದೇಶ ಸಾರಲು ಮತ್ತು ಆಸ್ಪತ್ರೆ ಸೋಂಕುಗಳನ್ನು ತಡೆಗಟ್ಟುವುದಕ್ಕೆ ವೈದ್ಯರು ಹಾಗೂ ಇತರ ಆರೋಗ್ಯ ಆರೈಕೆ ವೃತ್ತಿಪರರು ನಿಯಮಿತವಾಗಿ ಕೈಗಳನ್ನು ತೊಳೆಯುವ ಅಭ್ಯಾಸವನ್ನು ಪ್ರೋತ್ಸಾಹಿಸಲು ಜಾಗತಿಕ ಕೈತೊಳೆಯುವ ದಿನದಂದು ಒಂದು ಸಾಮಾಜಿಕ ಉಪಕ್ರಮವಾಗಿ ನಾವಿದನ್ನು ಆಚರಿಸಿದೆವು.’ ಎಂದು ಡಾ.ಎಚ್.ಎಸ್.ಬಲ್ಲಾಳ್ ವಿವರಿಸಿದರು.

ಸೂಕ್ತ ರೀತಿಯಲ್ಲಿ ಕೈ ಸ್ವಚ್ಛಗೊಳಿಸುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಸಾಧ್ಯವಾಗಲಿದೆ. ನಾವು ಈ ಅಭ್ಯಾಸವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ವಿನೋದ್ ಭಟ್ ಅಭಿಪ್ರಾಯ ಪಟ್ಟರು.

ಡಾ.ದಯಾನಂದ ಇದರಲ್ಲಿ ಪಾಲ್ಗೊಂಡವರನ್ನೆಲ್ಲ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News