ಅದು ವಿವೇಕಾನಂದ ರಸ್ತೆಯಲ್ಲ-ಜೋಗಿ ಮಠ ರಸ್ತೆ : ಮೇಯರ್
ಮಂಗಳೂರು, ಜ.13: ಕದ್ರಿಯಲ್ಲಿರುವುದು ಜೋಗಿ ಮಠ ರಸ್ತೆ. ಅಲ್ಲಿ ವಿವೇಕಾನಂದ ರಸ್ತೆಯೇ ಇಲ್ಲ. ಆದಾಗ್ಯೂ ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರಾ ಈ ರಸ್ತೆಗೆ ವಿವೇಕಾನಂದ ರಸ್ತೆಯ ನಾಮಫಲಕ ಅಳವಡಿಸಿದ್ದಾರೆ. ಯಾವುದೇ ರಸ್ತೆಗೆ ಹೆಸರಿಡುವ ಮುನ್ನ ಪಾಲಿಕೆಯ ಒಪ್ಪಿಗೆ ಪಡೆಯಬೇಕು. ಆದರೆ ರೂಪಾ ಡಿ. ಬಂಗೇರಾ ನೀತಿ ನಿಯಮಗಳನ್ನು ಪಾಲಿಸದೆ ಅನಧಿಕೃತವಾಗಿ ನಾಮಫಲಕ ಅಳವಡಿಸಿದ್ದಾರೆ. ಅದನ್ನು ಪಾಲಿಕೆ ತೆರವುಗೊಳಿಸಿದೆ ಎಂದು ಮೇಯರ್ ಹರಿನಾಥ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕದ್ರಿಯ ಜೋಗಿಮಠಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಅಲ್ಲಿನ ರಸ್ತೆಗೆ ಜೋಗಿ ಮಠ ರಸ್ತೆ ಎಂದೇ ಹೆಸರಿದೆ. ಈ ರಸ್ತೆಗೆ ವಿವೇಕಾನಂದ ರಸ್ತೆ ಎಂದು ನಾಮಫಲಕ ಅನಾವರಣ ಮಾಡಿದ್ದು ಜೋಗಿ ಮಠದ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ನಾನು ಜೋಗಿ ಮಠದ ಅಧ್ಯಕ್ಷನಾಗಿದ್ದು, ನನ್ನನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ ನಾನು ಹೋಗಿಲ್ಲ. ಯಾಕೆಂದರೆ ಅದು ವಿವೇಕಾನಂದ ರಸ್ತೆಯೇ ಅಲ್ಲ. ಆ ಬಗ್ಗೆ ಪಾಲಿಕೆಯಲ್ಲಿ ನಿರ್ಣಯವೂ ಆಗಿಲ್ಲ. ಹಾಗಾಗಿ ಅದನ್ನು ಪಾಲಿಕೆ ತೆರವುಗೊಳಿಸಿದೆ ಎಂದರು.