×
Ad

ವಿಶ್ವ ಮಾನವತೆಯ ಸಂದೇಶ ಆಳ್ವಾಸ್‌ನಲ್ಲಿ ಸಾಕಾರ: ಹೆಗ್ಗಡೆ

Update: 2017-01-13 21:44 IST

ಮೂಡುಬಿದಿರೆ, ಜ.13: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಜರಗುವ 23ನೆ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಮೂಡುಬಿದಿರೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಚಾಲನೆ ದೊರೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 40 ಸಾವಿರಕ್ಕೂ ಅಧಿಕ ನೆರೆದ ಪ್ರೇಕ್ಷಕರ ಸಮ್ಮುಖದಲ್ಲಿ ಉತ್ಸವವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆಳ್ವಾಸ್ ವಿರಾಸತ್ ಕಾರ್ಮಕ್ರಮದ ಹಿಂದೆ ವಿಶ್ವ ಮಾನವರಾಗಬೇಕು ಎಂಬ ಉದ್ದೇಶ ಸಾಕಾರಗೊಳ್ಳುತ್ತಿದೆ ಎಂದರು.

ಜೀವನದಲ್ಲಿ ಶಿಸ್ತಿಗಿಂತ ಮಿಗಿಲಾದ ಸಂಪತ್ತು ಇಲ್ಲ. ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಂಡು ಮುಂದಿನ ಜೀವನಕ್ಕೆ ಪದಾರ್ಪಣೆ ಮಾಡಿದಾಗ ತನ್ನಿಂದ ತಾನೇ ಗೌರವ, ಸಂಪತ್ತು ಲಭ್ಯವಾಗುತ್ತದೆ ಎಂದು ಡಾ.ಹೆಗ್ಗಡೆ ನುಡಿದರು.

ಇದೇ ಸಂದರ್ಭ ಪ್ರಸಿದ್ಧ ಭರತನಾಟ್ಯ ಗುರು ಪದ್ಮಭೂಷಣ ವಿ.ಪಿ.ಧನಂಜಯನ್‌ರಿಗೆ ಒಂದು ಲಕ್ಷ ರೂ. ಮೊತ್ತ ನಗದು ಸಹಿತ ಈ ವರ್ಷದ ಆಳ್ವಾಸ್ ವಿರಾಸತ್ 2017ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಲೆ ಮಾತ್ರ ಎಲ್ಲ ಹೃದಯವನ್ನು ಬೆಸೆಯುವ ಜತೆಗೆ ಎಲ್ಲರನ್ನೂ ಒಂದುಗೂಡಿಸುತ್ತದೆ ಎಂದರು.
ಉತ್ತಮ ವಿದ್ಯೆ ದೊರೆತಾಗ ವಿನಯ ಲಭ್ಯವಾಗುತ್ತದೆ. ಜತೆಗೆ ಗೌರವ ತನ್ನಿಂದ ತಾನೇ ದೊರೆತು ಸಂಪತ್ತು ಕ್ರೋಢೀಕರಣವಾಗುತ್ತದೆ. ಅವೆಲ್ಲವನ್ನೂ ಇತರರಿಗೆ ಹಂಚಿದಾಗ ಸಂತೃಪ್ತಿ ಉಂಟಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಂತಾ ಧನಂಜಯನ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಅಭಯಚಂದ್ರ ಜೈನ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಜಯರಾಮ ಭಟ್, ಅದಾನಿ ಯುಪಿಸಿಎಲ್ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಕೆ.ಶ್ರೀಪತಿ ಭಟ್, ದೇವಿಪ್ರಸಾದ್ ಶೆಟ್ಟಿ, ಮುಸ್ತಫಾ ಎಸ್.ಎಂ., ಕೆನರಾ ಬ್ಯಾಂಕ್ ಜಿ.ಎಂ. ವಿರೂಪಾಕ್ಷ, ರಾಮಚಂದ್ರ ಶೆಟ್ಟಿ, ತೇಜಸ್ವಿ ಅನಂತ ಕುಮಾರ್, ಜಯಕರ ಆಳ್ವ, ಮೀನಾಕ್ಷಿ ಆಳ್ವ, ರೋನ್ಸ್ ಸೋಮನ್ಸ್, ವರುಣ್ ಜೈನ್ ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸ್ವಾಗತಿಸಿದರು.

ಪಿಆರ್‌ಒ ಡಾ.ಪದ್ಮನಾಭ ಶೆಣೈ ಪ್ರಶಸ್ತಿ ಪುರಸ್ಕೃತರ ಪರಿಚಯ ನೀಡಿದರು.

ಉಪನ್ಯಾಸಕಿ ದೀಪಾ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಲಾವಿದರಾದ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ಪ್ರವೀಣ್ ಗೋಡ್ಕಿಂಡಿಯಿಚಿದ ಕೊಳಲು ಬಾನ್ಸುರಿ ಜುಗಲ್ ಬಂದಿ, ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು.


ಇಷ್ಟು ದೊಡ್ಡ ಮಟ್ಟದ ಪ್ರೇಕ್ಷಕರ ನಡುವೆ ಪ್ರಶಸ್ತಿ ಸ್ವೀಕರಿಸುವುದು ಇದೇ ಮೊದಲು. ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ.
ವಿ.ಪಿ.ಧನಂಜಯನ್


ನಾಟ್ಯಗುರುವಿಗೆ ನವ ನಾಟ್ಯದಿಂದ ಸಮ್ಮಾನ
ನಾಟ್ಯಗುರು ವಿ.ಪಿ.ಧನಂಜಯನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಜತೆಗೆ ದೇಶದ ನಾನಾ ಭಾಗದ ಶಾಸ್ತ್ರೀಯ ನೃತ್ಯ ಪ್ರಕಾರದಿಂದ ಅವರನ್ನು ಗೌರವಿಸಿದುದು ಈ ಬಾರಿಯ ವಿಶೇಷತೆಯಾಗಿತ್ತು. ಮೋಹಿನಿಯಾಟ್ಟಂನಿಂದ ಪ್ರಾರಂಭಗೊಂಡ ಗೌರವ ಪ್ರದಾನ, ಭರತನಾಟ್ಯ, ಮಣಿಪುರಿ, ಕೂಚುಪುಡಿ, ಸತ್ರಿಯಾ, ಕಥಕ್, ಒಡಿಸ್ಸಿ, ಕಥಕ್ಕಳಿಯೊಂದಿಗೆ ಕರಾವಳಿಯ ಯಕ್ಷಗಾನದ ಬಡಗು ಮತ್ತು ತೆಂಕುತಿಟ್ಟು ನಾಟ್ಯದೊಂದಿಗೆ ಮುಕ್ತಾಯಗೊಂಡಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News