ರೈತ ಪ್ರಶಸ್ತಿ ಪಡೆಯುವಾಸೆ: ನಟ ಪ್ರಕಾಶ್ ರೈ
ಮಂಗಳೂರು, ಜ. 13: ಸಿನಿಮಾ, ರಂಗಭೂಮಿಯನ್ನು ದಾಟಿ ರೈತರ ಪರವಾಗಿ ಕೆಲಸದಲ್ಲಿ ತೊಡಗಿರುವ ನನಗೆ ಈ ಸಂದೇಶ ಪ್ರತಿಷ್ಠಾನದಿಂದ ‘ಉತ್ತಮ ರೈತ ಪ್ರಶಸ್ತಿ’ ಪಡೆಯುವ ಆಸೆ ಇದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ವತಿಯಿಂದ ಇಂದು ನಂತೂರ್ ಬಳಿಯ ಪ್ರೇಮನಗರದಲ್ಲಿ ನಡೆದ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸಂದೇಶ ಮಾಧ್ಯಮ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
‘ಪ್ರಕಾಶ್‌ರಾಜ್ ಫೌಂಡೇಶನ್’ ಸಂಸ್ಥೆಯನ್ನು ಆರಂಭಿಸಿದ್ದೇನೆ. ಹಳ್ಳಿಯೊಂದನು ದತ್ತು ಪಡೆದಿದ್ದೇನೆ. ಈ ಮೂಲಕ ಹೆಚ್ಚೆಚ್ಚು ರೈತ ಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಪ್ರಕಾಶ್ ರೈ ಹೇಳಿದರು.
ಸಂದೇಶ ಪ್ರತಿಷ್ಠಾನದವರು ನನ್ನನ್ನು ಗುರುತಿಸಿ ಗೌರವಿಸಿದ್ದಾರೆ. ನನ್ನ ನೆಲದಲ್ಲಿ, ನನ್ನ ಊರಿನಲ್ಲಿ ಗೌರವ ಪಡೆಯುವುದೆಂದರೆ ನನಗೆ ಹೆಮ್ಮೆಯ ವಿಚಾರ. ಅವರು ನೀಡಿರುವ ಗೌರವ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನನಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಾಡೋಜ ಡಾ.ಕಮಲಾ ಹಂಪನ ಅವರಿಗೆ ‘ಸಂದೇಶ ಸಾಹಿತ್ಯ ಪ್ರಶಸ್ತಿ’, ಯವರಾಜ್ ಅವರಿಗೆ ‘ಸಂದೇಶ ಕಲಾ ಪ್ರಶಸ್ತಿ’, ಅನಿಲ್ ಪತ್ರಾವೊ ಅವರಿಗೆ ‘ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ’, ಜಾನ್ ದೇವರಾಜ್ ಅವರಿಗೆ ‘ಸಂದೇಶ ವಿಶೇಷ ಪ್ರಶಸ್ತಿ’ ಶಮಿತಾ ರಾವ್ ಮತ್ತು ರೆನಿಟಾ ಲೋಬೊ ಅವರಿಗೆ ‘ಸಂದೇಶ ಶಿಕ್ಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮಾರಂಭದ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಅ.ವಂ.ಹೆನ್ರಿ ಡಿಸೋಜಾ ವಹಿಸಿದ್ದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ಅ.ವಂ.ಅಲೋಶಿಯಸ್ ಪೌಲ್ ಡಿಸೋಜಾ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್, ಶಾಸಕ ಜೆ.ಆರ್‌ಲೋಬೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹಾಗೂ ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ರಾಯ್ ಕ್ಯಾಸ್ತಲಿನೊ, ಸಂದೇಶ ಪ್ರತಿಷ್ಠಾನದ ಟ್ರಸ್ಟಿ ರೆ.ಫಾ.ಐವನ್ ಪಿಂಟೊ ಉಪಸ್ಥಿತರಿದ್ದರು.