ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆ : ವಿವೇಕಾನಂದ ಕಾಲೇಜಿಗೆ ಪ್ರಥಮ ಸ್ಥಾನ
ಬೆಳ್ತಂಗಡಿ , ಜ.13 : ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಸಂಸ್ಥಾಪಕ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ನಡೆಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಶ್ರೀವತ್ಸ ಮತ್ತು ಕಾರ್ತಿಕ್ ಪ್ರಥಮ ಸ್ಥಾನ ಗಳಿಸಿದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ಕಾಲೇಜಿನ ಅನಿಲ್ ಕುಮಾರ್ ಮತ್ತು ಹರ್ಷಿತ ದ್ವಿತೀಯ ಸ್ಥಾನಕ್ಕೆ ಭಾಜನರಾದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರದ ವಿದ್ಯಾರ್ಥಿನಿ ಶಿಲ್ಪಶ್ರಿ ಕೆ.ಎಸ್ ವೈಯಕ್ತಿಕ ವಿಭಾಗದಲ್ಲಿ ಬಹುಮಾನವನ್ನು ಪಡೆದರು.
ನೋಟು ರದ್ದತಿ ಪೂರಕವೋ...? ಮಾರಕವೋ...? ಎಂಬ ವಿಚಾರದ ಕುರಿತು ನಡೆದ ಚರ್ಚಾ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಹದಿನೇಳು ಕಾಲೇಜುಗಳು ಭಾಗವಹಿಸಿದ್ದವು.
ಮಂಜಾನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ, ಪ್ರೊ. ಎಸ್. ಪ್ರಭಾಕರ್ ಮಾತನಾಡಿ, ಚರ್ಚಾಸ್ಪರ್ಧೆ ಪ್ರಬುದ್ದ ಆಲೋಚನೆ, ವಿವೇಚನೆ, ವಿಶ್ಲೇಷಣೆಗೆ ಇರುವ ಸೂಕ್ತ ವೇದಿಕೆ. ಇದರಿಂದ ಬೌದ್ಧಿಕ, ವೈಯಕ್ತಿಕ ಬೆಳವಣಿಗೆ ಸಾಧ್ಯ. ಸೋಲು-ಗೆಲುವನ್ನು ಚಿಂತಿಸುವ ಬದಲು ಸಿಕ್ಕಿರುವ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವುದು ಉತ್ತಮ ಎಂದ ಅವರು ಸ್ಪರ್ಧಿಗಳಿಗೆ ಶುಭಹಾರೈಸಿದರು.
ಕಾಲೇಜು ಪ್ರಾಂಶುಪಾಲ ಡಾ. ಕೆ. ಎಸ್.ಮೋಹನ ನಾರಾಯಣ ವಿಜೇತರಿಗೆ ಬಹುಮಾನ ವಿತರಿಸಿದರು.