ಬಿಜೆಪಿ ಅಧಿಕ ಸ್ಥಾನ ಗೆದ್ದರೂ ಕಾಂಗ್ರೆಸ್ ಬೆಂಬಲಿತರಿಗೆ ಅಧಿಕಾರ ?

Update: 2017-01-14 10:43 GMT

ಬಂಟ್ವಾಳ, ಜ.14: ತಾಲೂಕು ಕೃಷಿ ಉತ್ಪನ್ನ ಸಮಿತಿಗೆ ಗುರುವಾರ ನಡೆದ ಚುನಾವಣೆಯ ಸಂಪೂರ್ಣ ಫಲಿತಾಂಶ ಶನಿವಾರ ಮಧ್ಯಾಹ್ನದ ವೇಳೆಗೆ ಪ್ರಕಟಗೊಂಡಿದ್ದು, 13 ಕ್ಷೇತ್ರಗಳ ಪೈಕಿ 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅ್ಯರ್ಥಿಗಳು ಜಯಬೇರಿ ಸಾಧಿಸಿದರೆ 6 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.

ವರ್ತಕರ ಕ್ಷೇತ್ರ ಸೇಹಿತ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದರೆ ಸಹಕಾರ ಕ್ಷೇತ್ರಕ್ಕೆ ಜಿಪಂ ಸದಸ್ಯ ರವೀಂದ್ರ ಕಂಬಳಿ ಅವಿರೋಧ ಆಯ್ಕೆಯಾಗಿದ್ದರು. ಉಳಿದಂತೆ ಸಂಗಬೆಟ್ಟು ಪದ್ಮರಾಜ ಬಲ್ಲಾಳ್, ಚೆನ್ನೈತ್ತೋಡಿ ಭಾರತಿ ಎಸ್. ರೈ, ಅಮ್ಟಾಡಿ ದಿವಾಕರ ಪಂಬದಬೆಟ್ಟು, ಕೊಳ್ನಾಡು ಚಂದ್ರಶೇಖರ ರೈ, ಕಡೇಶ್ವಾಲ್ಯ ಚಂದ್ರಶೇಖರ ಪೂಜಾರಿ ಹಾಗೂ ಪಾಣೆಮಂಗಳೂರು ಪದ್ಮನಾಭ ರೈ ಕೆ. (ಎಲ್ಲರೂ ಕಾಂಗ್ರೆಸ್ ಬೆಂಬಲಿತರು)ರವರು ಜಯಬೇರಿ ಸಾಧಿಸಿದ್ದಾರೆ.

ಹಾಗೆಯೇ ಅಳಿಕೆ ಗೀತಾ ಶೆಟ್ಟಿ, ಕೆದಿಲ ಜಗದೀಶ್, ತುಂಬೆ ವಿಠಲ ಸಾಲ್ಯಾನ್, ಸರಪಾಡಿ ಹರಿಶ್ಚಂದ್ರ ಪೂಜಾರಿ, ಮಾಣಿ ನೇಮಿರಾಜ ರೈ, ವರ್ತಕರ ಕ್ಷೇತ್ರ ಬಾಲಕೃಷ್ಣ ಆಳ್ವ (ಎಲ್ಲರೂ ಬಿಜೆಪಿ ಬೆಂಬಲಿತರು)ರವರು ಜಯಗಳಿಸಿದ್ದಾರೆ.

ಬಿ.ಸಿ.ರೋಡ್ ಸಮೀಪದ ಮೊಡಂಕಾಪಿನ ಇನ್ಫೆಂಟ್ ಜೀಸಸ್ ಪ್ರೌಢಶಾಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ನಡೆಯಿತು. ತಹಶೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕಾ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ ಎಣಿಕೆ ಕಾರ್ಯ ನಡೆಸಿದರು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆ ಕಾರ್ಯವು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣಗೊಂಡು ಫಲಿತಾಂಶ ಹೊರಬಿದ್ದಿತು.

*ಕಾಂಗ್ರೆಸ್‌ಗೆ ಅಧಿಕಾರ:

ಬಂಟ್ವಾಳ ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತರು ಏಳು ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲು ಸರಳ ಬಹುಮತ ಹೊಂದಿದ್ದರೂ 6 ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಾಣಿಸುತ್ತಿದೆ. ಏಕೆಂದರೆ ಶೀಘ್ರದಲ್ಲೇ ಎಪಿಎಂಸಿಗೆ ನಾಮನಿರ್ದೇಶಿತ ಸದಸ್ಯರ ನೇಮಕವಾಗುವ ಸಾಧ್ಯತೆ ಇದೆ. ಎಪಿಎಂಸಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನದ ಹಕ್ಕು ಹೊಂದಿರುವುದರಿಂದ ಅಧಿಕಾರ ಕಾಂಗ್ರೆಸ್ ಬೆಂಬಲಿತರ ಪಾಲಾಗುವುದು ಬಹುತೇಕ ನಿಚ್ಚಳ ಎಂದು ಹೇಳಲಾಗುತ್ತಿದೆ.

ಸಚಿವ ರೈ ಅಭಿನಂದನೆ
ಎಪಿಎಂಸಿ ಚುನಾವಣೆಯ ಫಲಿತಾಂಶದ ಬಗ್ಗೆ ಬಂಟ್ವಾಳ ತಾಲೂಕಿನ ಅರಳ ಶ್ರೀ ಗರುಡ ಮಹಕಾಳಿ ದೇವಸ್ಥಾನದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಎಲ್ಲ ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅ್ಯರ್ಥಿಗಳು ಜಯಬೇರಿ ಸಾಧಿಸಿರುವುದು ಸಂತಸ ತಂದಿದೆ. ತನ್ನ ವಿಧಾನ ಸಭಾ ಕ್ಷೇತ್ರವಾದ ಬಂಟ್ವಾಳದಲ್ಲೂ ಕಾಂಗ್ರೆಸ್ ಹಿಂದಿಗಿಂತ ಹೆಚ್ಚುವರಿಯಾಗಿ ಎರಡು ಸ್ಥಾನವನ್ನು ಜಯಿಸಿದೆ. ಶೀಘ್ರದಲ್ಲೇ ಬಂಟ್ವಾಳ ಎಪಿಎಂಸಿಗೂ ನಾಮನಿರ್ದೇಶಿತ ಸದಸ್ಯರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದ ಅವರು, ಜಿಲ್ಲೆಯ ಎಲ್ಲಾ ವಿಜೇತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News