×
Ad

ಸಜಿಪ ನಾಸೀರ್ ಕೊಲೆ ಪ್ರಕರಣ : ಆರೋಪಿಗಳ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

Update: 2017-01-14 16:42 IST

ಬಂಟ್ವಾಳ, ಜ. 14: ಸಜೀಪ ನಾಸೀರ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಬಂಟ್ವಾಳ ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. 

ಕೊಲೆ ಆರೋಪಿಗಳಾದ ತಾಲೂಕಿನ ಮಂಚಿ ನಿವಾಸಿ ವಿಠಲ ಅಡಂತ್ಯಾಯ ಎಂಬವರ ಪುತ್ರ ವಿಜೇತ್ ಕುಮಾರ್, ಬಡಗ ಉಳಿಪಾಡಿ ನಿವಾಸಿ ಶೇಖರ ಪೂಜಾರಿ ಎಂಬವರ ಪುತ್ರ ಕಿರಣ್ ಪೂಜಾರಿ, ಮಂಗಳೂರು ತಿರುವೈಲ್ ನಿವಾಸಿ ಸದಾನಂದ ಪೂಜಾರಿ ಎಂಬವರ ಪುತ್ರ ಅನಿಶ್ ಯಾನೆ ಧನು ಪೂಜಾರಿ ಎಂಬವರ ಜಾಮೀನನ್ನು ರದ್ದು ಪಡಿಸಿರುವ ಹೈಕೋರ್ಟ್ ಜನವರಿ 16ರ ಒಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ಹೊರಡಿಸಿದೆ. 

ಗಾರೆ ಕೆಲಸ ಮಾಡುತ್ತಿದ್ದ ಸಜೀಪ ಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ಮುಹಮ್ಮದ್ ನಾಸೀರ್ ಎಂಬವರು 2015ರ ಸಪ್ಟೆಂಬರ್ 7ರಂದು ಸಂಜೆ ವೇಳೆಗೆ ಕೆಲಸ ಮುಗಿಸಿ ಅದೇ ಊರಿನ ಮುಹಮ್ಮದ್ ಮುಸ್ತಫಾ ಎಂಬವರ ಆಟೋ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ದಾರಿ ಕೇಳುವ ನೆಪದಲ್ಲಿ ಆಟೋ ನಿಲ್ಲಿಸಿದ ನಾಲ್ವರ ತಂಡ ಆಟೋ ರಿಕ್ಷಾದಲ್ಲಿದ್ದ  ಇಬ್ಬರನ್ನು ಮಾರಕಾಸ್ತ್ರದಿಂದ ಕಡಿದು ಪರಾರಿಯಾಗಿತ್ತು. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಮುಹಮ್ಮದ್ ನಾಸೀರ್ ಸ್ಥಳದಲ್ಲೇ ಮೃತಪಟ್ಟರೆ, ಮುಹಮ್ಮದ್ ಮುಸ್ತಫಾ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. 

ಘಟನೆಯ ಬಳಿಕ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಬಂಟ್ವಾಳ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು. ಆದರೆ ಮೂವರೂ ಆರೋಪಿಗಳು ತಿಂಗಳ ಒಳಗೆ  ಜಾಮೀನು ಪಡೆದು ಹೊರ ಬಂದಿದ್ದರು. 

ಅಮಾಯಕನ ಕೊಲೆ ಹಾಗೂ ಕೊಲೆ ಯತ್ನದಂತ ಗಂಭೀರ ಪ್ರಕರಣದ ಆರೋಪಿಗಳಿಗೆ ಬರೀ ಒಂದು ತಿಂಗಳಲ್ಲಿ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಮುಹಮ್ಮದ್ ನಾಸೀರ್ ಕುಂಟುಂಬ ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಮೂವರು ಆರೋಪಿಗಳ ಜಾಮೀನು ಅರ್ಜಿ ರದ್ದುಗೊಳಿಸುವಂತೆ ಆಗ್ರಹಿಸಿತ್ತು. 

ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಹೈಕೋರ್ಟ್ ಎರಡೂ ಕಡೆಯವರ ವಾದ, ಪ್ರತಿವಾದ ಹಾಗೂ ಬಂಟ್ವಾಳ ಪೊಲೀಸರ ಪ್ರತಿಕ್ರಿಯೆ ಆಲಿಸಿ ಆರೋಪಿಗಳಿಗೆ ಕೆಳ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ಅಲ್ಲದೆ ಆರೋಪಿಗಳು ಜನವರಿ 16ರ ಒಳಗಾಗಿ ನ್ಯಾಯಾಯಕ್ಕೆ ಶರಣಾಗುವಂತೆ ಆದೇಶ ಹೊರಡಿಸಿದೆ. 

ಪ್ರಕರಣದ ಇನ್ನೋರ್ವ ಆರೋಪಿ ಬಂಟ್ವಾಳ ತಾಲೂಕಿನ ಮಂಚಿ ನಿವಾಸಿ ಅಭಿ ಯಾನೆ ಅಭಿಜಿತ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. 

ಅರ್ಜಿದಾರರ ಪರ ನ್ಯಾಯವಾದಿ ತ್ವಾಹೀರ್ ಬೆಂಗಳೂರು ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News