5 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ: ಸಚಿವ ಪ್ರಮೋದ್
ಉಡುಪಿ, ಜ.14: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂತರ್ ಜಲ ಹೆಚ್ಚಳಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ನಡೆಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಆದಿಉಡುಪಿಯಲ್ಲಿರುವ 25 ಸೆಂಟ್ಸ್ ಜಾಗದಲ್ಲಿ ಸುಮಾರು 91ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಕಚೇರಿ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಉಡುಪಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯು ಜಿಪಂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ 40000ರೂ. ಬಾಡಿಗೆ ಪಾವತಿಸುತ್ತಿದೆ. ಸ್ವಂತ ಕಟ್ಟಡ ನಿರ್ಮಾಣದ ನಂತರ ಈ ಬಾಡಿಗೆ ಮೊತ್ತ ಉಳಿತಾಯವಾಗುವುದರಿಂದ ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಅನುಕೂಲವಾಗುತ್ತದೆ. ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುವ ಈ ಕಟ್ಟಡ ಎಂಟು ತಿಂಗಳಲ್ಲಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ನಗರಗಳು ಯೋಜನಾಬದ್ದವಾಗಿ ನಿರ್ಮಾಣವಾಗಲು ಪ್ರಾಧಿಕಾರಗಳ ಸ್ಥಾಪನೆ ಯಾಗಿದೆ. ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ವಿದೇಶದ ಪ್ರವಾಸಿಗರು ಆಗಮಿಸುವುದರಿಂದ, ಉಡುಪಿ ನಗರ ಸುಂದರವಾಗಿ ಬೆಳೆಯಲಿ, ಯೋಜನಾಬದ್ದವಾಗಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿ ಎಂದು ತಿಳಿಸಿದರು.
ಬೈಂದೂರು ಶಾಸಕ ಗೋಪಾಲ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಬ್ಲೋಸಂ ಫೆರ್ನಾಂಡಿಸ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಪ್ರಾಧಿಕಾರದ ಸದಸ್ಯರಾದ ರಮೇಶ್ ಕಾಂಚನ್, ವೈಲೆಟ್ ಡಿಸೋಜ, ಪ್ರವೀಣ್ ಶೆಟ್ಟಿ, ಗಿರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಧಿಕಾರದ ಆಯುಕ್ತ ಜನಾರ್ದನ್ ಸ್ವಾಗತಿಸಿ, ವಂದಿಸಿದರು.