ಸಾಹಿತ್ಯ ವಲಯದ ರಾಯಭಾರಿ ವಿವೇಕ್ ರೈ: ಪ್ರೊ. ಹಂಪನಾ
ಮಂಗಳೂರು, ಜ.14: ಗಂಭೀರ, ವಸ್ತು ಸ್ಥಿತಿ ಅಧ್ಯಯನ, ಸಂಯಮ, ಶಿಸ್ತು, ಕ್ರಮವನ್ನು ಅಳವಡಿಸಿಕೊಂಡ ಡಾ. ಬಿ.ಎ. ವಿವೇಕ್ ರೈ ಸಾಹಿತ್ಯ ವಲಯದ ರಾಯಭಾರಿಯಾಗಿದ್ದಾರೆ ಎಂದು ಪ್ರೊ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೆನರಾ ಪದವಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಕೃತಿ ಆಶಯ ಪ್ರಕಾಶನದ ವತಿಯಿಂದ ನಡೆದ ಡಾ. ಬಿ.ಎ. ವಿವೇಕ್ ರೈ ಬರೆದ ‘ಮೊದಲ ಮೆಟ್ಟಿಲು’ ಪುಸ್ತಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ವಿವೇಕ್ ರೈ ಲೇಖನಗಳಲ್ಲಿನ ಗದ್ಯಶೈಲಿಯನ್ನು ಅಲಂಕಾರಕ್ಕೆ ಬಳಸಿದ್ದಾರೆ. ವಿಚಾರ ಹಾಗೂ ಪ್ರಭಾವ ಬೀರುವ ಬರವಣಿಗೆಗಳನ್ನು ಕಾಣಬಹುದಾಗಿದೆ. ಪದ್ಯದ ಲಯ, ಸೌಷ್ಠ ಅದ್ಭುತವಾಗಿರುತ್ತವೆ. ವಿವೇಕರು ಸತತ ಅಧ್ಯಯನಪ್ರಿಯರು. ಅವರ ಮುನ್ನುಡಿ ಬರಹಗಳು ಪ್ರಾಯೋಗಿಕ ಮೌಲ್ಯ, ವರ್ತುಲ ಮಾದರಿಯನ್ನು ಹೊಂದಿರುತ್ತವೆ ಎಂದು ಪ್ರೊ. ಹಂಪ ನಾಗರಾಜಯ್ಯ ತಿಳಿಸಿದರು.
ಬೇಟೆಗೆ ಸಂಬಂಧಿಸಿದಂತೆ ಕೃತಿಗಳನ್ನು ಹೆಚ್ಚು ರಚಿಸುವವರಲ್ಲಿ ದ.ಕ. ಜಿಲ್ಲೆಯವರನ್ನು ಬಿಟ್ಟರೆ ದೇಶದಲ್ಲಿ ಯಾರೂ ಬರೆದಿಲ್ಲ. ಮೃಗಯಾ ಸಾಹಿತ್ಯ, ಮೃಗ ಬೇಟೆಗಳಂತಹ ಮೌಲ್ವಿಕ ಕೃತಿಗಳು ರಚನೆಯಾಗಿವೆ. ಕರಾವಳಿ ಭಾಗದ ಕೃತಿಗಳು ಸಾಹಿತ್ಯ, ಸಂಸ್ಕೃತಿಯ ಕೆನೆ ಪದರವಾಗಿರುತ್ತವೆ ಎಂದು ಅವರು ನುಡಿದರು.
ಸಾಹಿತ್ಯ ಕೃತಿಗಳು ಕನ್ನಡಿಗರಿಗಷ್ಟೇ ತಲುಪಿದರೆ ಸಾಲದು. ಕನ್ನಡೇತರರಿಗೂ ವಿಸ್ತರಿಸುವಂತಾಗಬೇಕು. ವಿವೇಕರು ಲೋಕ ಸಂಚಾರಿ. ತುಳು ಗಾದೆಯಿಂದ ಹಿಡಿದು ಅವರ ಮೊದಲ ಮೆಟ್ಟಿಲು ಪುಸ್ತಕಗಳವರೆಗೂ ಅಧ್ಯಯನ ಮಾಡಿರುವ ಕುರಿತ ಬರಹಗಳನ್ನು ಕೃತಿ ಹೊಂದಿದೆ. ಅಗಾಧ, ನಿರಂತರ ಪಯಣ, ಚರ್ಚೆ, ಸಂವಾದಗಳಿಂದ ಗಳಿಸಿದ ತಿಳುವಳಿಕೆಯ ಬೆಳಕನ್ನು ಮೊದಲ ಮೆಟ್ಟಿಲಿನ ಜೊತೆ ಅರ್ಪಿಸಿದ್ದಾರೆ ಎಂದು ಪ್ರೊ. ಹಂಪ ನಾಗರಾಜಯ್ಯ ಹೇಳಿದರು.
ಮೌಲ್ಯಿಕ ಆದರ್ಶವಾಗಿದ್ದು, ಈ ಭಾಗದ ಜನಪದ ಸಾಹಿತ್ಯವನ್ನು ವಿವೇಕರು ಜಗದ ಎತ್ತರಕ್ಕೆ ಬೆಳೆಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಂಸ್ಕೃತಿಕ ವಲಯದಲ್ಲಿ ಮಹತ್ತರವಾದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತೂಕದ ಬರವಣಿಗೆಯನ್ನು ಸಾಹಿತ್ಯಕ್ಕೆ ನೀಡಿದ್ದಾರೆ ಎಂದರು.
ಡಾ. ನಾ. ದಾಮೋದರ ಶೆಟ್ಟಿ ಮಾತನಾಡಿ, ವಿವೇಕ್ ರೈ ಮೂಲತಃ ವಿಜ್ಞಾನದ ವಿದ್ಯಾರ್ಥಿಯಾಗಿದ್ದು, ಸಾಹಿತ್ಯ ಕ್ಷೇತ್ರದತ್ತ ವಾಲಿದವರು. ಓರ್ವ ಸಾಹಿತ್ಯದ ಕುರಿತು ನೋಡುವುದಕ್ಕೂ ವಿಜ್ಞಾನ ಲೋಕದ ದೃಷ್ಟಿಯಿಂದ ಅವಲೋಕನ ಮಾಡುವುದಕ್ಕೂ ವ್ಯತ್ಯಾಸಗಳಿವೆ. ವಿವೇಕರು ಶಾಸ್ತ್ರವಿಲ್ಲದ ಕೃತಿಗಳಿಗೆ ಶಾಸ್ತ್ರ ಬರೆಯುವವರಾಗಿದ್ದಾರೆ ಎಂದು ಹೇಳಿದರು.
ಮುನ್ನುಡಿ ಸಮತೂಕದ ಆವಿರ್ಭಾವ. ಮೊದಲ ಮೆಟ್ಟಿಲು ಪುಸ್ತಕದಲ್ಲಿನ ಅವರ ಮುನ್ನುಡಿಗಳು ಲಿಖಿತ ಶಾಸ್ತ್ರಗಳಂತಿವೆ. ಈ ಕೃತಿಯು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವುದು. ಕೃತಿಯ ಕೇಂದ್ರೀಯ ಶಕ್ತಿ ತೆರೆದು ಮುನ್ನುಡಿ ಬರೆಯುವವರಲ್ಲಿ ವಿವೇಕರು ಪ್ರಾವೀಣ್ಯರು. ಸಂಶೋಧನಾ ಗ್ರಂಥಗಳಿಗೆ ಮುನ್ನುಡಿ ಬರೆಯುವಾಗ ಅವರ ಮನಸ್ಸು ಗರಿಗೆದರುತ್ತದೆ. ಮುನ್ನುಡಿಗೂ ವೈಜ್ಞಾನಿಕ ದೆಸೆಯಲ್ಲಿ ಬರೆಯಬಹುದಾದರೆ ಶಾಸ್ತ್ರಗಳನ್ನು ರಚಿಸಬಹುದು. ಮುನ್ನುಡಿ ಪ್ರಕಾರಕ್ಕೆ ವಿವೇಕರ ಕೊಡುಗೆ ಅಪಾರ ಎಂದು ಡಾ.ನಾ.ದಾಮೋದರ ಶೆಟ್ಟಿ ತಿಳಿಸಿದರು.
ಚಂದ್ರಕಲಾ ನಂದಾವರ ಮಾತನಾಡಿ, ತುಳು ಜನಪದ, ಯಕ್ಷಗಾನ ಸಂಪಾದನೆ, ಸಂಪುಟಗಳ ರಚನೆಗಳನ್ನೊಳಗೊಂಡ ವಿವೇಕರ ಬರವಣಿಗೆಗಳು ಕ್ರಿಯಾಶೀಲತೆಯಿಂದ ಕೂಡಿವೆ. ಸೃಜನಶೀಲ, ಆಧುನಿಕ ಗ್ರಂಥ ಸಂಪಾದನೆಗೆ ವಿವೇಕರು ಮಾದರಿಯಾಗಿದ್ದಾರೆ. ಸಾಹಿತ್ಯದಲ್ಲಿ ದಣಿವಿಲ್ಲದೆ ದುಡಿದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ.ಚಿನ್ನಪ್ಪಗೌಡ ಮಾತನಾಡಿ, ವಿವೇಕರ ಮುನ್ನುಡಿಗಳು ವೈಜ್ಞಾನಿಕ ದೃಷ್ಟಿಕೋನದಿಂದ ಕೂಡಿದ್ದು, ಪ್ರಸ್ತಾವನೆಗಳು ಶಾಸ್ತ್ರೀಯವಾಗಿರುತ್ತವೆ. ಪ್ರಾದೇಶಿಕ ವಿವಿರಗಳ ಜೊತೆ ಪ್ರಕಟಗೊಳಿಸುವ ಇವರ ಬರವಣಿಗೆ ತಾತ್ವಿಕ ಚೌಕಟ್ಟಿಗೆ ತಂದು ನಿಲ್ಲಿಸುತ್ತವೆ ಎಂದು ತಿಳಿಸಿದರು.
ಪ್ರೊ. ಬಿ.ಎ. ವಿವೇಕ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ನಾಡೋಜ ಕಮಲಾ ಹಂಪನಾ, ಜಿ.ಎನ್. ಮೋಹನ್, ನಂದಳಿಕೆ ಬಾಲಚಂದ್ರನ್, ವಾದಿರಾಜ ಭಟ್, ಏರಿಯಾ ಲಕ್ಷ್ಮೀನಾರಾಯಣ ಆಳ್ವ, ಡಾ. ವಾಮನ ನಂದಾವರ, ಡಾ. ಡಿ.ಕೆ. ಸರಸ್ವತಿ, ಡಾ. ನರೇಂದ್ರ ರೈ ದೆರ್ಲ, ಭಾಸ್ಕರ್ ರೈ ಉಪಸ್ಥಿತರಿದ್ದರು.
ಮಾನಸಾ ಪ್ರಾರ್ಥಿಸಿದರು. ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಸ್ವಾಗತಿಸಿದರು.
ಡಾ. ಆರ್. ನರಸಿಂಹ ಮೂರ್ತಿ ನಿರೂಪಿಸಿದರು.
ಕಲ್ಲೂರು ನಾಗೇಶ್ ವಂದಿಸಿದರು.
ಮೊದಲ ಮೆಟ್ಟಿಲು ಕೃತಿಯು 76 ಬರಹಗಳನ್ನು ಹೊಂದಿದ್ದು, 3 ಮಜಲುಗಳಲ್ಲಿ ವರ್ಗೀಕರಿಸಲಾಗಿದೆ. ವಿವೇಕರು ಬೇರೆಯವರ ಪುಸ್ತಕಗಳಿಗೆ ಬರೆದ ಮುನ್ನುಡಿಗಳು, ಅವರದೇ ಪುಸ್ತಕಗಳಿಗೆ ಬರೆದ ಅರಿಕೆ, ಮುನ್ನುಡಿಗಳು ಹಾಗೂ ಅವರು ಸಂಪಾದಿಸಿದ ಪುಸ್ತಕಗಳಿಗೆ ಬರೆದ ಮುನ್ನುಡಿಗಳಾಗಿವೆ. ಇವುಗಳನ್ನು ಸಮರ್ಥವಾಗಿ ವರ್ಗೀಕರಣ ಮಾಡಲಾಗಿದೆ.