ಕನ್ಯಾನ ಶೂಟೌಟ್ : ದಾಖಲಾದ ಪ್ರಕರಣವೇನು ?

Update: 2017-01-14 14:11 GMT

ಬಂಟ್ವಾಳ , ಜ. 14 :  ಶುಕ್ರವಾರ ತಡರಾತ್ರಿ ವಿಟ್ಲ ಕಸ್ಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ನಡೆದ ಗುಂಡೇಟಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಇಲ್ಲಿನ ನಿವಾಸಿ ಇಂದ್ರ ಕುಮಾರ್(64) ರೈಫಲ್ನ ನಿಂದ ಗುಂಡುಹಾರಿಸಿ ಆತ್ಮಹತ್ಯೆ ಮಾಡಿಕೊಂಡವರು.

ಆತ್ಮಹತ್ಯೆಗೂ ಮುನ್ನ ಇವರು ತನ್ನ ಮಗನ ಮೇಲೆ ಗುಂಡುಹಾರಿಸಿ ಕೊಲೆಗೆ ಯತ್ನಿಸಿದ್ದು, ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ.

ಘಟನೆ ವಿವರ

ಕೃಷಿಕರಾಗಿದ್ದ ಇಂದ್ರಕುಮಾರ್ ಅವರ ಪುತ್ರ ಚಂದ್ರಹಾಸ್ ರಾತ್ರಿ 9.30 ರ ವೇಳೆಗೆ ತನ್ನ ಮನೆಗೆ ಬಂದಿದ್ದು, ತಾಯಿಯ ಜೊತೆ ಊಟಕ್ಕೆ ಕುಳಿತ್ತಿದ್ದರು. ಈ ವೇಳೆ ಬಂದೂಕು ಶಬ್ದ ಇವರ ಕಿವಿಗೆ ಕೇಳಿಸಿದ್ದು, ಅರ್ಧಕ್ಕೆ ಊಟ ಬಿಟ್ಟು ಎದ್ದಿದ್ದಾರೆ. ಇದೇ ವೇಳೆ ಅವರ ತಂದೆ ಚಂದ್ರಹಾಸರ ಮೇಲೆ ಗುಂಡು ಹಾರಿಸಿದ್ದು, ಕೂದಲೆಳೆಯಿಂದ ಚಂದ್ರಹಾಸರು ಪಾರಾಗಿದ್ದಾರೆ. ತಕ್ಷಣ ಅವರು ಅಲ್ಲಿಂದ ಹೊರಗೆ ಓಡಿ, ಪಕ್ಕದ ಮನೆಯ ಗೇಟು ತೆರೆಯುತ್ತಿದ್ದಂತೆಯೇ ತಂದೆ ಇಂದ್ರ ಕುಮಾರ್ ಇನ್ನೊಂದು ಸುತ್ತು ಗುಂಡು ಹಾರಿಸಿದ್ದು, ಚಂದ್ರಹಾಸ ಅವರ ಬೆನ್ನಿಗೆ ಗಾಯವಾಗಿದೆ.

ಈ ವೇಳೆ ತನ್ನ ಗುಂಡಿನಿಂದ ಮಗ ಸತ್ತಿರಬಹುದೆಂಬ ಅನುಮಾನದಲ್ಲಿ ಇಂದ್ರ ಕುಮಾರ್ ಅವರು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಂದೆ ಕಳೆದ 20 ವರ್ಷಗಳಿಂದ ತನ್ನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದು, ಕೆಲ ತಿಂಗಳಿನಿಂದ ನಿನ್ನನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸುತ್ತಿದ್ದರು ಎಂದು ಮಗ ಚಂದ್ರಹಾಸ ಈ ಹಿಂದೆಯೇ ವಿಟ್ಲಠಾಣೆಗೆ ದೂರು ನೀಡಿದ್ದರು. ಬಳಿಕ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಲಾಗಿತ್ತು. ಇದೀಗ ಚಂದ್ರಹಾಸ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮೃತ ಇಂದ್ರ ಕುಮಾರ್ ವಿರುದ್ದ ಕೊಲೆಯತ್ನ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News