ಗೋವಾ : ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ನಾಳೆ ಬಿಡುಗಡೆ
ಪಣಜಿ,ಜ.21:ಗೋವಾ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೆ ಹಾಗೂ ಅಂತಿಮ ಪಟ್ಟಿಯನ್ನು ಬಿಜೆಪಿ ರವಿವಾರ ಬಿಡುಗಡೆಗೊಳಿಸಲಿದೆಯೆಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿನಯ್ ತೆಂಡುಲ್ಕರ್ ತಿಳಿಸಿದ್ದಾರೆ. ಪಣಜಿಯಲ್ಲಿ ಶನಿವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಿದ್ದ ಅವರು ಬಿಜೆಪಿಯು 36-37 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಉಳಿದೆಡೆ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಲಿದೆಯೆಂದು ತಿಳಿಸಿದರು.
ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿದ ಮೊದಲ ಹಂತದ ಪಟ್ಟಿಯಲ್ಲಿ ಹಾಲಿಶಾಸಕರಾದ ವಿಷ್ಣು ವಾೆ (ಸೈಂಟ್ ಆ್ಯಂಡ್ರೆ ಕ್ಷೇತ್ರ), ರಮೇಶ್ ತಾವಡ್‌ಕರ್ (ಕಾನಾಕೊನಾ) ಹಾಗೂ ಆನಂತ್ ಶೇಟ್ (ಮಾಯೆಂ) ಅವರನ್ನು ಕೈಬಿಡಲಾಗಿದೆ. ಇವರ ಪೈಕಿ ವಾೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದರಿಂದ, ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅವರ ಸಹೋದರ,ಗೋವಾ ವಿವಿಯ ನಿವೃತ್ತ ಪ್ರೊಫೆಸರ್ ರಾಮರಾವ್‌ಗೆ ಸೈಂಟ್ ಆ್ಯಂಡ್ರೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ. ಸೈಂಟ್ ಆ್ಯಂಡ್ರೆ ಕ್ರೈಸ್ತ ಸಮುದಾಯದ ಬಾಹುಳ್ಯವಿರುವ ಕ್ಷೇತ್ರವಾಗಿದೆ. ಟಿಕೆಟ್ ವಂಚಿತ ಇನ್ನಿಬ್ಬರು ಶಾಸಕರಲ್ಲಿ ತಾವಡ್‌ಕರ್ ಕೃಷಿ ಸಚಿವರಾಗಿದ್ದರೆ, ಶೇಟ್ ಅವರು ವಿಧಾನಸಭಾ ಸ್ಪೀಕರ್ ಆಗಿದ್ದಾರೆ.