ಮಕ್ಕಳನ್ನು ಕಳಕೊಂಡ ತಾಯಂದಿರ ಮನಕಲಕುವ ಭೇಟಿ : ಜಿಷ್ಣು ತಾಯಿಯನ್ನು ಸಂತೈಸಿದ ಶಾಹಿನ್ ನ ತಾಯಿ
ಪಾಳಯಂ,ಜ.14: ಏಕೈಕ ಮಗನ ಅಗಲಿಕೆಯಿಂದ ತೀವ್ರ ನೊಂದಿರುವ ಜಿಷ್ಣು ಪ್ರನೋಯ್ ಕುಟುಂಬವನ್ನು ಪ್ರೀತಿಯಿಂದ ಸಂತೈಸಲು ಫಾತಿಮಾ ಉಮ್ಮ ಮತ್ತು ಅವರ ಕುಟುಂಬದವರು ಜಿಷ್ಣು ವಳಯಂನ ಮನೆಗೆ ಭೇಟಿ ನೀಡಿದ್ದಾರೆ. ಫಾತಿಮಾ ಉಮ್ಮ ತೃಶೂರಿನ ಅತ್ತಿಕ್ಕಾವ್ ರಾಯಲ್ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನ ಬಾವಿಯಲ್ಲಿ ಮೃತನಾಗಿ ಪತ್ತೆಯಾದ ಎರಡನೆ ವರ್ಷದ ಬಿಟೆಕ್ ವಿದ್ಯಾರ್ಥಿ ಶಾಹಿನ್(21) ಎಂಬಾತನ ತಾಯಿಯಾಗಿದ್ದಾರೆ. ಆತನ ತಂದೆ ಹಂಝ, ಸಹೋದರ ಶಬೀರ್ ಜಿಷ್ಣು ಪ್ರಣೋಯಿಯ ಮನೆಗೆ ಭೇಟಿ ನೀಡಿ ಜಿಷ್ಣು ಅಮ್ಮನನ್ನು ಸಂತೈಸಿದರು.
ಜಿಷ್ಣು ಪ್ರಣೋಯ್ ಇತ್ತೀಚೆಗೆ ನೆಹರೂ ಕಾಲೇಜ್ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಜಿಷ್ಣು ನಿಗೂಢ ರೀತಿಯಲ್ಲಿ ಮೃತನಾಗಿದ್ದ, ಈ ಸುದ್ದಿಯನ್ನು ಪತ್ರಿಕೆಗಳಿಂದ ತಿಳಿದು ಕೊಂಡ ಫಾತಿಮಾ ಉಮ್ಮ ಎಷ್ಟೇ ದೂರವಿದ್ದರೂ ಜಿಷ್ಣುವಿನ ತಂದೆ- ತಾಯಿಯರನ್ನು ನೋಡಿ ಸಂತೈಸಲು ನಿರ್ಧರಿಸಿದ್ದರು. ಆದರಂತೆ ಅವರು ತನ್ನ ಇನ್ನೊಬ್ಬ ಪುತ್ರ ಶಬೀರ್ ಮತ್ತು ತನ್ನ ಪತಿಯೊಂದಿಗೆ ಹೇಳಿದಾಗ ಅವರು ಕೂಡಲೇ ಜಿಷ್ಣುವಿನ ಮನೆಗೆ ಹೊರಟು ನಿಂತರು. ಸ್ವಯಂ ಹರೆಯದ ಮಗನನ್ನು ಕಳಕೊಂಡಿರುವ ಫಾತಿಮಾರಿಗೆ ಅಮ್ಮನ ನೋವು ಚೆನ್ನಾಗಿ ಗೊತ್ತಿದೆ. ನಿಗೂಢ ರೀತಿಯಲ್ಲಿ ಮೃತಪಟ್ಟ ತನ್ನ ಮಗ ಶಾಹಿನ್‌ನನ್ನು ಬಹಳಷ್ಟು ಕನಸುಗಳನ್ನಿಟ್ಟುಕೊಂಡು ಫಾತಿಮಾ ಕಾಲೇಜಿಗೆ ಸೇರಿಸಿದ್ದರು.
ಆದರೆ ಒಂದು ದಿನ ಮಗನ ಮೃತ ಶರೀರ ಅವರ ಮನೆಗೆ ಬಂದಿತ್ತು. ತಂದೆ ಹಂಝ ಆಘಾತಗೊಂಡಿದ್ದರು. ಅವರು ಈಗಷ್ಟೇ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಮನೆಯಿಂದ ಆಚೆಗೆ ಹೋಗಲು ಆರಂಭಿಸಿದ್ದಾರೆ. ಜಿಷ್ಣುವಿನ ಅಮ್ಮನನ್ನು ಭೇಟಿಯಾದ ಫಾತಿಮಾ ಉಮ್ಮ ಬಿಗಿದಪ್ಪಿ ಅತ್ತರು. ಈ ದೃಶ್ಯ ಅಲ್ಲಿದ್ದ ಇತರರ ಕಣ್ಣಲ್ಲಿ ನೀರೂರಿಸಿತು. ಖಾಸಗಿ ಕಾಲೇಜಿನೊಂದಿಗೆ ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಈ ಕುಟುಂಬ ಹೋರಾಡುತ್ತಿದೆ.
2015 ಆಗಸ್ಟ್ 21ಕ್ಕೆ ಶಾಹಿನ್ ಬಾವಿಯಲ್ಲಿ ಮೃತನಾಗಿ ಪತ್ತೆಯಾಗಿದ್ದ. ಕಾಲೇಜು ಅಧಿಕಾರಿಗಳು ಕಾಲೇಜಿನಲ್ಲಿ ಓಣಂ ಸಮಾರಂಭದಲ್ಲಾದ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಪೊಲೀಸರನ್ನು ಕರೆಸಿದ್ದರು. ಈನಡುವೆ ಶಾಹಿನ್ ಅಲ್ಲಿಂದ ನಾಪತ್ತೆಯಾಗಿದ್ದ. ನಂತರ ಬಾವಿಯಲ್ಲಿ ಅವನ ಶವ ದೊರಕಿತ್ತು. ಮನೆಯವರಿಗೂ ತಿಳಿಸದೆ ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿತ್ತು. ಶಾಹಿನ್ ಪ್ರಜ್ಞೆ ಕಳಕೊಂಡ ಸ್ಥಿತಿಯಲ್ಲಿ ಬಾವಿಗೆ ಬಿದ್ದು ಮೃತನಾಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ನ್ಯಾಯಕ್ಕಾಗಿ ಎಷ್ಟೇ ಅಲೆದಾಡಿದರೂ ಈ ಕುಟುಂಬಕ್ಕೆ ಇನ್ನೂ ನ್ಯಾಯ ದೊರಕಿಲ್ಲ. ಸರಕಾರ ಬದಲಾದರೂ ಪ್ರಯೋಜನವಾಗಿಲ್ಲ. ಕೇರಳದ ಹೊಸ ಎಲ್‌ಡಿಎಫ್ ಸರಕಾರಕ್ಕೂ ಅವರು ದೂರು ನೀಡಿದ್ದಾರೆ. ಜಿಷ್ಣುಪ್ರಣೋಯಿಯ ಪ್ರಕರಣವನ್ನು ತನಿಖೆ ಮಾಡುವ ತೃಶೂರ್ ಕ್ರೈಂಬ್ರಾಂಚ್ ಶಾಹಿನ್ ಸಾವನ್ನೂ ತನಿಖೆನಡೆಸುತ್ತಿದೆ ಎಂದು ವರದಿ ತಿಳಿಸಿದೆ.