ವಿದ್ಯಾರ್ಥಿಗಳು ಬಲಿಷ್ಠರಾದರೆ ಭಾರತ ಬಲಿಷ್ಠವಾದಂತೆ-ಯು.ಟಿ.ಖಾದರ್
ಭಟ್ಕಳ, ಜ.14 : ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದ್ದು ವಿದ್ಯಾರ್ಥಿಗಳು ಬಲಿಷ್ಠರಾದಾಗ ದೇಶ ಬಲಿಷ್ಠಗೊಳ್ಳುವುದೆಂದು ರಾಜ್ಯ ಆಹಾರ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ 77ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇಲ್ಲಿನ ಐ.ಎಎಸ್,ಐಪಿಎಸ್ ಅಧಿಕಾರಿಗಳು, ಮಂತ್ರಿಗಳು, ರಾಜಕಾರಣಿಗಳು ಬಲಿಷ್ಠರಾದರೆ ದೇಶ ಬಲಿಷ್ಠ ರಾಷ್ಟ್ರವಾಗದು. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಬಲಿಷ್ಠರಾಗಬೇಕು. ಶಿಕ್ಷಣ ಕ್ಷೇತ್ರವು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದ್ದು ದೇಶವನ್ನು ಮುನ್ನಡೆಸಲು ಇದು ಪ್ರಾಮಾಣಿವಾಗಬೇಕು. ಆದರೆ ಇಂದು ಶಿಕ್ಷಿತರೆ ದೇಶಕ್ಕೆ ಸಮಸ್ಯೆಯಾಗುತ್ತಿದ್ದಾರೆ. ಮಹಿಳೆಯ ದೌರ್ಜನ್ಯ, ಭ್ರಷ್ಟಚಾರ, ಅಪ್ರಮಾಣಿಕತೆ ಹೆಚ್ಚಾಗಿ ಶಿಕ್ಷಿತ ಸಮುದಾಯದಲ್ಲೇ ಕಂಡು ಬರುತ್ತಿದೆ ಎಂದ ಅವರು , ಇದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ಮೌಲ್ಯಧಾರಿತ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಪಾಲಕರು ತಮ್ಮ ಮಕ್ಕಳ ಸಮಸ್ಯೆಗಳ ಕುರಿತಂತೆ ನಿರ್ಲಕ್ಷ್ಯ ಭಾವನೆ ಹೊಂದಿದ್ದು , ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ ಎಂದ ಅವರು , ಪಾಲಕರು ತಮ್ಮ ಮನೆಯ ಕಾರ್ಯಕ್ರಮಗಳಿಗೆ ನೀಡುವಷ್ಟೇ ಆದ್ಯತೆಯನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಬೇಕು ಎಂದು ಪಾಲಕರಿಗೆ ಕರೆ ನೀಡಿದರು. ಒಂದು ಕುಟುಂಬದ ಮಕ್ಕಳ ಕಣ್ಣಲ್ಲಿ ಪ್ರಕಾಶವಿದೆ ಎಂದಾದರೆ ಆ ಕುಟುಂಬದ ಭವಿಷ್ಯ ಉತ್ತಮವಾಗಿದೆ ಎಂದು ಹೇಳಬಹುದು. ವಿದ್ಯಾರ್ಥಿಗಳ ಕಣ್ಣುಗಳು ಪ್ರಕಾಶಿಸುವಂತಾಗಬೇಕು. ಅವರ ಮೊಗದಲ್ಲಿ ಮಂದಹಾಸ ಮೂಡುವಂತೆ ಶಿಕ್ಷಕರು ಪಾಲಕು ಜಾಗೃತೆ ವಹಿಸಬೇಕು ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮಿಲ್ಲಿ ಕೌನ್ಸಲ್ ಮೌಲಾನ ಫಾರುಖ್ ಫೈಝಾನ್ ರಷಾದಿ , ಮುಸ್ಲಿಮರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿನ್ನುಂಟು ಮಾಡುತ್ತಿದ್ದಾರೆ. ಉತ್ತಮ ಶಿಕ್ಷಣ ನೀಡುವುದರ ಮೂಲಕ ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ನಾಂದಿ ಹಾಡುತ್ತಿದ್ದಾರೆ. ನಾವು ಪ್ರವಾದಿ ಮುಹಮ್ಮದ್ ಪೈಗಂಬರರ ಅನುಯಾಯಿಗಳಾಗಿ ಕೇವಲ ಅವರ ಆಹಾರ, ಉಡುಗೆ,ತೊಡುಗೆ ಗಳ ಕುರಿತಂತೆ ಮಾತನಾಡುತ್ತೇವೆ . ಆದರೆ ಪ್ರವಾದಿ ಮುಹಮ್ಮದ್ ಪೈಗಂಬರರು ಮಾಡಿದ ಸಾಮಾಜಿಕ ಕ್ರಾಂತಿ, ಮಾನವೀಯ ಕಳಕಳಿ ಕುರಿತಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕಾಗಿದೆ. ಮನುಷ್ಯರ ಸಮಸ್ಯೆಗಳನ್ನು ಆಲಿಸುವ ಮತ್ತು ಅವುಗಳನ್ನು ಪರಿಹರಿಸುವ ಹೃದಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು, ನೆರೆಯವನು ಹಸಿದಿರುವಾಗ ಹೊಟ್ಟೆ ತುಂಬ ಊಟ ಮಾಡಿ ಮಲಗುವನು ನಮ್ಮವನಲ್ಲ ಎಂಬ ಪ್ರವಾದಿ ಮುಹಮ್ಮದ್ ಪೈಗಂಬರರ ಶಿಕ್ಷಣವನ್ನು ವಿದ್ಯಾರ್ಥಿ ಸಮೂಹಕ್ಕೆ ಕಲಿಸಿಕೊಡುವ ಅಗತ್ಯವಿದೆ ಎಂದರು.
ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹೀಂ ಜುಕಾಕೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮರ್ಕಝಿ ಜಮಾಅತುಲ್ ಮುಸ್ಲಿಂ ಪ್ರಧಾನ ಖಾಝಿ ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಮೌಲಾನ ನೂರ್ ಆಹಮದ್ ಬೇಗ್ ಬಾಖವಿ ಮಾತನಾಡಿದರು.
ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹಮದ್ ದಫೆದಾರ್, ಅಂಜುಮನ್ ಬಾಲಕರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮುಹಿದ್ದೀನ್ ಖತ್ತಾಲಿ, ಕಾರ್ಯದರ್ಶಿ ಅಬ್ದುಲ್ ವಾಜೀದ್ ಕೋಲಾ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.