×
Ad

ಆರ್‌ಬಿಐ ಸ್ವಾಯತ್ತೆಯ ಉಲ್ಲಂಘನೆಯಾಗಿಲ್ಲ:ವಿತ್ತ ಸಚಿವಾಲಯ

Update: 2017-01-14 20:49 IST

ಹೊಸದಿಲ್ಲಿ,ಜ.14: ಸರಕಾರವು ಆರ್‌ಬಿಐನ ಸ್ವಾಯತ್ತೆಯನ್ನು ಉಲ್ಲಂಘಿಸಿದೆ ಎಂಬ ಮಾಧ್ಯಮ ವರದಿಗಳಿಗೆ ಇಂದು ಪ್ರತಿಕ್ರಿಯಿಸಿರುವ ವಿತ್ತ ಸಚಿವಾಲಯವು ಕಾನೂನು ಕಡ್ಡಾಯಗೊಳಿಸಿರುವ ಅಥವಾ ವಾಡಿಕೆಯಾಗಿರುವ ಸಮಾಲೋಚನೆಗಳು ಆರ್‌ಬಿಐನ ಸ್ವಾತಂತ್ರದ ಉಲ್ಲಂಘನೆಯೆಂದು ಪರಿಗಣಿಸಲಾಗದು ಎಂದು ಹೇಳಿದೆ. ತನಗೆ ಆರ್‌ಬಿಐ ಬಗ್ಗೆ ಗೌರವವಿದೆ ಎಂದೂ ಅದು ತಿಳಿಸಿದೆ.

ಸರಕಾರದಿಂದ ‘ಅನಗತ್ಯ ಹಸ್ತಕ್ಷೇಪ ’ದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್‌ಬಿಐನ ವಿವಿಧ ನೌಕರರ ಸಂಘಗಳು ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಪತ್ರಗಳನ್ನು ಬರೆದು ಒತ್ತಾಯಿಸಿವೆ. ಕರೆನ್ಸಿ ನಿರ್ವಹಣೆಯಲ್ಲಿ ಸಮನ್ವಯಕ್ಕಾಗಿ ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿಯೋರ್ವರನ್ನು ಆರ್‌ಬಿಐ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತಿದೆ ಎಂಬ ವರದಿಗಳನ್ನು ತಾನು ಮಾಧ್ಯಮಗಳಲ್ಲಿ ಓದಿರುವುದಾಗಿ ಆರ್‌ಬಿಐ ಅಧಿಕಾರಿಗಳು ಮತ್ತು ನೌಕರರ ಸಂಯುಕ್ತ ವೇದಿಕೆಯು ಪತ್ರದಲ್ಲಿ ತಿಳಿಸಿದೆ.

 ಇದು ನಿಜವಾಗಿದ್ದರೆ ಅತ್ಯಂತ ದುರದೃಷ್ಟಕರವಾಗಿದೆ.ಆರ್‌ಬಿಐ ಸ್ವಾಯತ್ತೆಯನ್ನು ಉಲ್ಲಂಘಿಸುವ ಸರಕಾರದ ಈ ಕ್ರಮವನ್ನು ನಾವು ತೀವ್ರವಾಗಿ ಆಕ್ಷೇಪಿಸುತ್ತೇವೆ ಎಂದು ಅದು ಹೇಳಿದೆ.

ಆರ್‌ಬಿಐ ಕಾರ್ಯಾಚರಣೆಗಳು ಮತ್ತು ಅದರ ಭಾರೀ ಸಾಧನೆಯನ್ನು ಕಳಪೆಯಾಗಿ ತೋರಿಸಿರುವ ಜೊತೆಗೆ ಸರಕಾರವು ಈಗ ಅದರ ವ್ಯಾಪ್ತಿಯನ್ನು ರಾಜಾರೋಷ ಅತಿಕ್ರಮಿಸುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದಿರುವ ಅದು, ತನ್ನ ಕರೆನ್ಸಿ ಚೆಸ್ಟ್ ನಿರ್ವಹಣೆಯನ್ನು ಸಮನ್ವಯಗೊಳಿಸುವ ಸಂಪೂರ್ಣ ಸಾಮರ್ಥ್ಯವನ್ನು ಆರ್‌ಬಿಐ ಹೊಂದಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News