ಭಾರತದಲ್ಲಿ ನೋಟು ನಿಷೇಧದಿಂದ ನೇಪಾಳಕ್ಕೆ ತೀವ್ರ ಸಂಕಷ್ಟ

Update: 2017-01-14 15:23 GMT

ಹೊಸದಿಲ್ಲಿ, ಜ.14: ಭಾರತದ ನೋಟು ನಿಷೇಧ ಕ್ರಮದಿಂದಾಗಿ ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಗಂಭೀವಾದ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಸರಕಾರ ಮಾತ್ರವಲ್ಲ, ಸಾಮಾನ್ಯ ಪ್ರಜೆಗಳೂ ಇದರಿಂದ ತೊಂದರೆಗೀಡಾಗಿದ್ದಾರೆಂದು ನೇಪಾಳದ ರಾಯಭಾರಿ ದಿಲೀಪ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

   ಹೊಸದಿಲ್ಲಿಯಲ್ಲಿ ಶುಕ್ರವಾರ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ರಿಸರ್ವ್‌ಬ್ಯಾಂಕ್‌ನಿಂದ ನೋಟು ಪೂರೈಕೆಯ ಅಭಾವದ ಹಿನ್ನೆಲೆಯಲ್ಲಿ ನೇಪಾಳ ಸರಕಾರದ ವಾರ್ಷಿಕ ಭಾರತೀಯ ಕರೆನ್ಸಿ ಸಂಗ್ರಹದಲ್ಲಿ ತೀವ್ರ ಕೊರತೆಯುಂಟಾಗಿದೆ ಎಂದರು.

 ‘‘ಭಾರತೀಯ ಕರೆನ್ಸಿಯನ್ನು ನಿಯಮಿತ ಪೂರೈಕೆಗೆ ವಿಶೇಷ ಏರ್ಪಾಡುಗಳನ್ನು ಮಾಡುವಂತೆ ನಾವು ಮನವಿ ಮಾಡಿದ್ದು, ಅದಕ್ಕೆ ಆರ್‌ಬಿಐನಿಂದ ಭರವಸೆಗಳು ದೊರೆತಿವೆ. ಆದರೆ ಪ್ರಸಕ್ತ ಕರೆನ್ಸಿ ಬಿಕ್ಕಟ್ಟಿನಿಂದ ಭಾರೀ ಸಂಖ್ಯೆಯ ನೇಪಾಳಿ ಜನತೆಯಲ್ಲಿ ಅಸಮಾಧಾನ ಹೆಚ್ಚುತ್ತಿರುವುದು ನಮಗೆ ಆತಂಕವುಂಟು ಮಾಡಿದೆ’’ಎಂದರು.

 ನೇಪಾಳದ ದುರ್ಗಮವಾದ ಹಿಮಾಲಯ ಪ್ರಾಂತ್ಯಗಳಲ್ಲಿ ವಾಸಿಸುತ್ತಿರುವ ನಾಗರಿಕರು, ತಮ್ಮಲ್ಲಿ ಉಳಿತಾಯವಾಗಿ ಇರಿಸಿದ್ದ ಭಾರತೀಯ ಕರೆನ್ಸಿಗಳನ್ನು ಬದಲಾಯಿಸಲು ಸಾಧ್ಯವಾಗದೆ ಹತಾಶರಾಗಿದ್ದಾರೆಂದು ಉಪಾಧ್ಯಾಯ ತಿಳಿಸಿದರು. ನೋಟು ಅಮಾನ್ಯತೆಯ ಬಗ್ಗೆ ವಿವರಣೆ ಕೇಳಿದ ದುರ್ಗಮ ಪರ್ವತ ಪ್ರದೇಶಗಳಲ್ಲಿರುವ ನೇಪಾಳಿ ಪೌರರಿಂದ ತನಗೆ ಕರೆಗಳು ಬರುತ್ತಿವೆ. ಹಳೆಯ ಭಾರತೀಯ ನೋಟುಗಳನ್ನು ಠೇವಣಿಯಿರಿಸಲು ಭಾರತ ತಮಗೆ ಅವಕಾಶ ನೀಡಬೇಕೆಂದು ಅವರು ಆಗ್ರಹಿಸುತ್ತಿದ್ದಾರೆಂದು ಉಪಾಧ್ಯಾಯ ಹೇಳಿದ್ದಾರೆ.

  ಭಾರತದ ನೋಟು ನಿಷೇಧದಿಂದ ಸಂತ್ರಸ್ತರಾ ನೇಪಾಳಿ ಜನತೆಗೆ ನೆರವಾಗಲು ಕೆಲವು ನಿರ್ದಿಷ್ಟ ನಿಯಮಗಳನ್ನು ರೂಪಿಸುವಂತೆ ನೇಪಾಳ ರಾಷ್ಟ್ರ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್‌ನ್ನು ಕೋರಿರುವುದಾಗಿ ಅವರು ಹೇಳಿದರು. ಉನ್ನತ ವೌಲ್ಯದ ಭಾರತೀಯ ನೋಟುಗಳನ್ನು ನೇಪಾಳಿ ಪ್ರಜೆಗಳು ಉಳಿತಾಯಕ್ಕೆ ಪ್ರಮಾಣಿತವಾದ ಕರೆನ್ಸಿಯೆಂದೇ ಪರಿಗಣಿಸಿದ್ದಾರೆ. ಆದರೆ ಹಠಾತ್ತನೆ 500 ರೂ. ಹಾಗೂ 1 ಸಾವಿರ ರೂ. ನೋಟುಗಳನ್ನು ರದ್ದುಪಡಿಸಿರುವುದು ಸಾಕಷ್ಟು ತೊಂದರೆಗಳನ್ನುಂಟು ಮಾಡಿದೆ ಎಂದರು. ನೋಟು ಅಮಾನ್ಯತೆಯಿಂದ ಉದ್ಭವಿಸಿರುವ ಪ್ರತಿಕೂಲ ಪರಿಣಾಮಗಳನ್ನು ನಿಭಾಯಿಸಲು ಭಾರತವು ಸಮರ್ಪಕವಾದ ಕ್ರಮಗಳನ್ನು ಕೈಗೊಂಡಿಲ್ಲವೆಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News