ರಶ್ಯ ರಾಯಭಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಟ್ರಂಪ್ ಸಹಾಯಕ

Update: 2017-01-14 15:40 GMT

ವಾಶಿಂಗ್ಟನ್, ಜ. 14: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹಾಕಾರ ಮೈಕಲ್ ಫ್ಲಿನ್ ಮತ್ತು ಅಮೆರಿಕಕ್ಕೆ ರಶ್ಯದ ರಾಯಭಾರಿ ಇತ್ತೀಚಿನ ವಾರಗಳಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪದಲ್ಲಿ ರಶ್ಯದ ವಿರುದ್ಧ ಒಬಾಮ ಆಡಳಿತ ದಿಗ್ಬಂಧನೆಗಳನ್ನು ವಿಧಿಸಿದ ದಿನದಂದೂ ಅವರಿಬ್ಬರ ನಡುವೆ ಸಂಪರ್ಕ ಏರ್ಪಟ್ಟಿತ್ತು ಎಂದಿದ್ದಾರೆ.

ಡಿಸೆಂಬರ್ 29ರಂದು ಫ್ಲಿನ್ ಮತ್ತು ರಶ್ಯದ ರಾಯಭಾರಿ ಸರ್ಗಿ ಕಿಸಲ್‌ಯಾಕ್ ಮಾತನಾಡಿದ್ದರು ಎಂಬುದನ್ನು ಆರಂಭದಲ್ಲಿ ಟ್ರಂಪ್ ಬಣದ ಅಧಿಕಾರಿಯೊಬ್ಬರು ನಿರಾಕರಿಸಿದರಾದರೂ, ಅಧ್ಯಕ್ಷ ಒಬಾಮ ದಿಗ್ಬಂಧನೆಗಳನ್ನು ವಿಧಿಸಿದ ದಿನದಂದು ಒಮ್ಮೆ ಅವರು ಫೋನ್‌ನಲ್ಲಿ ಮಾತನಾಡಿದ ಬಗ್ಗೆ ಟ್ರಂಪ್ ತಂಡಕ್ಕೆ ಮಾಹಿತಿಯಿದೆ ಎಂದು ಹೇಳಿದರು.

ಸರಕಾರ ರಚಿಸಲು ಆಯ್ಕೆಯಾಗಿರುವ ಆಡಳಿತಗಳು ಅಧಿಕಾರ ಸ್ವೀಕಾರಕ್ಕೆ ಮುಂಚಿತವಾಗಿ ವಿದೇಶಿ ಸರಕಾರಗಳೊಂದಿಗೆ ಮಾತುಕತೆಗಳನ್ನು ನಡೆಸುವುದು ಅಸಹಜವೇನಲ್ಲ. ಆದರೆ, ಒಬಾಮ ದಿಗ್ಬಂಧನೆಗಳನ್ನು ವಿಧಿಸಿದ ದಿನದಂದೇ ಪದೇ ಪದೇ ನಡೆದ ಸಂಪರ್ಕಗಳು, ಟ್ರಂಪ್ ತಂಡ ರಶ್ಯದ ಪ್ರತಿಕ್ರಿಯೆ ಬಗ್ಗೆ ಚರ್ಚಿಸಿದೆಯೇ ಅಥವಾ ರಶ್ಯದ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನೂ ನಿರ್ಧರಿಸಿದೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನೆು ಎತ್ತಿವೆ.ವಿಶೇಷವೆಂದರೆ, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅನಿರೀಕ್ಷಿತವಾಗಿ ಅಮೆರಿಕದ ವಿರುದ್ಧ ಪ್ರತೀಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಇದನ್ನು ನಿಯೋಜಿತ ಅಧ್ಯಕ್ಷ ಟ್ರಂಪ್ ಥಟ್ಟನೆ ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News