ಉಡುಪಿ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆ ಉದ್ಘಾಟನೆ
ಉಡುಪಿ, ಜ.14: ಉಡುಪಿ ನಗರದಲ್ಲಿ ಸುಮಾರು 2.60ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.
ಇದು ದೇಶದಲ್ಲೇ ಅತ್ಯಂತ ದೊಡ್ಡ ಮಹಿಳಾ ಮೀನು ಮಾರುಕಟ್ಟೆಯಾಗಿದೆ. ಇಲ್ಲಿ ಮೀನು ಮಾರಾಟ ಮಾಡುವವರು ಇಲ್ಲಿನ ಸ್ವಚ್ಛತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಮಾರಾಟ ಮಾಡುವವರು ಹಾಗೂ ಖರೀದಿಸುವ ಗ್ರಾಹಕರಿಗೆ ಇಲ್ಲಿ ಉತ್ತಮ ವಾತಾವರಣ ಒದಗಿಸಬೇಕಾಗಿದೆ. ಇಲ್ಲಿನ ಮೀನು ಮಾರಾಟಗಾರರಿಗೆ ಎರಡು ರೀತಿಯ ಸುಂಕ ವಿಧಿಸುವ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೌಂಟರ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮೀನುಗಾರರು ಹಾಗೂ ಮೀನು ಮಾರಾಟ ಮಾಡುವವರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಿ, ಕಾರ್ಮಿಕ ಇಲಾಖೆಯಲ್ಲಿರುವ ಸೌಲಭ್ಯ ಗಳನ್ನು ಇವರಿಗೂ ಒದಗಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ತಿಳಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯೆ ಗೀತಾ ರವಿ ಶೇಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಲೂಕು ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್, ದಿವಾಕರ್ ಕುಂದರ್, ಸತೀಶ್ ಅಮೀನ್ ಪಡುಕೆರೆ, ಕಿಶನ್‌ಹೆಗ್ಡೆ ಕೊಳ್ಕೆಬೈಲು ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ನಗರಸಭೆ ಆಯುಕ್ತ ಡಿ.ಮಂಜುನಾಥಯ್ಯ, ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಕೆ.ಆರ್.ದಯಾನಂದ್ ಉಪಸ್ಥಿತರಿದ್ದರು.
ಬಂದರು ಮತ್ತು ಮೀನುಗಾರಿಕಾ ಕಾರವಾರ ವಿಭಾಗದ ಸುಪರಿಡೆಂಟ್ ಇಂಜಿನಿಯರ್ ಕೆ.ಎಸ್.ಜಂಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಸ್ವಾಗತಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.
ವಿಳಂಬ ಕಾಮಗಾರಿ: 5ವರ್ಷಗಳ ಬಳಿಕ ಉದ್ಘಾಟನೆ
ನಗರದ ಪಿಪಿಸಿ ರಸ್ತೆಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸುವ ನಿಟ್ಟಿನಲ್ಲಿ ಇಲ್ಲಿನ ಮಹಿಳಾ ಮೀನು ಮಾರಾಟಗಾರರನ್ನು ಬೀಡಿನಗುಡ್ಡೆಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮಾರುಕಟ್ಟೆಗೆ 2012ರಲ್ಲಿ ವರ್ಗಾಯಿಸಲಾಗಿತ್ತು. ಒಂದು ವರ್ಷ ಕಳೆದರೂ ಮಾರುಕಟ್ಟೆಯ ಯಾವುದೇ ಕಾಮಗಾರಿ ಆರಂಭವಾಗಿರಲಿಲ್ಲ. 2013ರ ಮಾರ್ಚ್ ತಿಂಗಳಲ್ಲಿ ಇದಕ್ಕೆ ಆಡಳಿತ್ಮಾಕ ಅನುಮೋದನೆ ದೊರೆಯಿತು. ಅದರಂತೆ ಹೈದರಾಬಾದಿನ ಎನ್‌ಎಫ್‌ಡಿಬಿ ಯಿಂದ 1.80ಕೋಟಿ, ರಾಜ್ಯ ಸರಕಾರದಿಂದ 10ಲಕ್ಷ ರೂ ಮತ್ತು ನಗರಸಭೆಯಿಂದ 10ಲಕ್ಷ ರೂ. ವೆಚ್ಚದಲ್ಲಿ 76ಕೌಂಟರ್‌ಗಳ ಮಾರುಕಟ್ಟೆ ನಿರ್ಮಿಸುವ ಕುರಿತು ಯೋಜನೆಯನ್ನು ತಯಾರಿಸಲಾಯಿತು.
2014ರ ಫ್ರೆಬವರಿಯಲ್ಲಿ ಕೌಂಟರ್‌ಗಳನ್ನು ಹೆಚ್ಚಿಸಿ ಹೊಸ ವಿನ್ಯಾಸವನ್ನು ತಯಾರಿಸಲಾಯಿತು. ಕೌಂಟರ್ ಸಂಖ್ಯೆಯನ್ನು 76ರಿಂದ 174ಕ್ಕೆ ಏರಿಸಲಾ ಯಿತು.ಇದರಲ್ಲಿ 154 ರಿಟೇಲ್ ಮಾರಾಟಗಾರರು, 13 ರಖಂ ಮಾರಾಟಗಾರರು, 4 ಒಣ ಮೀನು ಮಾರಾಟಗಾರರು, 3 ಚಿಪ್ಪುಕಲ್ಲು ಮಾರಾಟಗಾರ ರಿಗೆ ಕೌಂಟರ್ ಒದಗಿಸಲಾಯಿತು. ಆದರೆ ಇದಕ್ಕೆ ಅನುದಾನದ ಕೊರತೆ ಉಂಟಾಗಿ ಕಾಮಗಾರಿ ಮತ್ತಷ್ಟು ವಿಳಂಬವಾಯಿತು. ಬಳಿಕ ನಗರಸಭೆ ಯಿಂದ ಹೆಚ್ಚುವರಿಯಾಗಿ 30ಲಕ್ಷ ರೂ. ಹಾಗೂ ಮೀನುಗಾರಿಕೆ ಇಲಾಖೆ ಯಿಂದ 30ಲಕ್ಷ ರೂ. ಒದಗಿಸಿ, ಇದೀಗ ಒಟ್ಟು 2.60ಲಕ್ಷ ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ.