ಶಿಕ್ಷಣ ವ್ಯವಸ್ಥೆಯಲ್ಲಿ ದೇಸಿಜ್ಞಾನವನ್ನು ಮಾನವ ಸಂಪನ್ಮೂಲವಾಗಿ ಬಳಸಿ : ಡಾ.ವಿವೇಕ ರೈ
ಉಡುಪಿ, ಜ.14: ನಮ್ಮ ಅಪರಿಮಿತ ಜಾನಪದ ಸಂಪತ್ತು ಇಂದು ಪಳೆಯುಳಿಕೆಯಾಗಿ ಉಳಿದಿದೆ. ಅದು ಸಮಕಾಲೀನ ಸಂದರ್ಭಕ್ಕೆ ಅಳವಡುವಂತೆ ಅನ್ವಯಿಕ ರೂಪಾಂತರವನ್ನು ಪಡೆಯಬೇಕು. ಜಾನಪದ ಕಲಾವಿದರು ಹಾಗೂ ಪರಂಪರೆಯ ನಿಜವಾದ ವಾಹಕರು ಹೊಂದಿರುವ ದೇಸಿ ಜ್ಞಾನವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳ ಬೇಕು ಎಂದು ಖ್ಯಾತ ತುಳು ಜಾನಪದ ವಿದ್ವಾಂಸ ಹಾಗೂ ಹಂಪಿ ಕನ್ನಡ ವಿವಿಯ ಮಾಜಿ ಕುಲಪತಿ ಡಾ.ಬಿ.ಎ.ವಿವೇಕ ರೈ ಕರೆ ನೀಡಿದ್ದಾರೆ.
ಮಣಿಪಾಲ ವಿವಿ, ಮಣಿಪಾಲದ ದಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷ ನೀಡಲಾಗುವ ‘ಹೊಸ ವರ್ಷದ ಪ್ರಶಸ್ತಿ-2017’ನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಪರಂಪರೆಯ ಜ್ಞಾನವನ್ನು ಬಳಸಿಕೊಂಡು ಇಟ್ಟುಕೊಂಡು ಜೊತೆಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಜೋಡಿಸುವ ಪ್ರಯೋಗಗಳು ನಡೆಯಬೇಕು. ಜನಪದ ಸಂಸ್ಕೃತಿಯನ್ನು ಸಹಜ ಪರಿಸರದಲ್ಲಿ ಸಂರಕ್ಷಿಸಿ ಇಡುತ್ತಲೇ, ಅದಕ್ಕೆ ಆರ್ಥಿಕ ಸಬಲತೆ ಮತ್ತು ಸಾಮಾಜಿಕ ಮನ್ನಣೆಯನ್ನು ಕೊಡುವ ಕಾರ್ಯತಂತ್ರ ರೂಪಿಸುವುದು ಇಂದಿನ ಮುಖ್ಯ ಸವಾಲು ಎಂದರು.
ಶಿಕ್ಷಣವು ಪ್ರಾಥಮಿಕ ಹಂತದಿಂದ ಸ್ಥಳೀಯ ಭಾಷೆಯ ಮೂಲಕವೇ ವಿಕಾಸ ಹೊಂದಬೇಕು. ಸ್ಥಳೀಯ ಮತ್ತು ಪರಂಪರೆಯ ಶಕ್ತಿ ಮತ್ತು ವಿನ್ಯಾಸಗಳನ್ನು ತನ್ನ ಜೀವಧಾತುವನ್ನಾಗಿ ರೂಪಿಸಿಕೊಳ್ಳಬೇಕು. ಜೊತೆಗೆ ಜಾಗತಿಕ ಭಾಷೆ ಹಾಗೂ ಚಿಂತನೆಗಳ ಅಧ್ಯಯನ ನಡೆಸುತ್ತಾ ಅವುಗಳನ್ನು ಅಳವಡಿಸಿಕೊಂಡು ಬೆಳೆಯಬೇಕು ಎಂದು ಡಾ.ರೈ ಸಲಹೆ ನೀಡಿದರು.
ವಿಶ್ವವಿದ್ಯಾಲಯಗಳು ಹೊಸ ಚಿಂತನೆಗಳನ್ನು ಬೆಳೆಸುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೇವಲ ಹೊಸ ವಸ್ತುಗಳ ನಿರ್ಮಾಣವಷ್ಟೇ ಅದರ ಗುರಿಯಾಗಿರಬಾರದು. ಜಾಗತಿಕ ಮಟ್ಟದಲ್ಲಿ ಹೊಸ ವಿಚಾರಗಳನ್ನು, ಹೊಸ ತಾತ್ವಿಕತೆಯನ್ನು ಕೊಡಲು ನಾವು ಸಮರ್ಥರಾಗಬೇಕು. ವಸ್ತುರೂಪದ ಸಂಸ್ಕೃತಿ ಗಿಂತ ಚಿಂತನರೂಪದ ಸಂಸ್ಕೃತಿಯ ಕೊಡುಗೆಗಳನ್ನು ನಮ್ಮ ವಿವಿಗಳು ನೀಡುವಂತಾಗಬೇಕು ಎಂದೂ ಡಾ.ವಿವೇಕ ರೈ ಹೇಳಿದರು. ವಿಶ್ವವಿದ್ಯಾಲಯಗಳು ಹೊಸ ಚಿಂತನೆಗಳನ್ನು ಬೆಳೆಸುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೇವಲ ಹೊಸ ವಸ್ತುಗಳ ನಿರ್ಮಾಣವಷ್ಟೇ ಅದರ ಗುರಿಯಾಗಿರಬಾರದು. ಜಾಗತಿಕ ಮಟ್ಟದಲ್ಲಿ ಹೊಸ ವಿಚಾರಗಳನ್ನು, ಹೊಸ ತಾತ್ವಿಕತೆಯನ್ನು ಕೊಡಲು ನಾವು ಸಮರ್ಥರಾಗಬೇಕು. ವಸ್ತುರೂಪದ ಸಂಸ್ಕೃತಿ ಗಿಂತ ಚಿಂತನರೂಪದ ಸಂಸ್ಕೃತಿಯ ಕೊಡುಗೆಗಳನ್ನು ನಮ್ಮ ವಿವಿಗಳು ನೀಡುವಂತಾಗಬೇಕು ಎಂದೂ ಡಾ.ವಿವೇಕ ರೈ ಹೇಳಿದರು.
ಡಾ.ವಿವೇಕ್ ರೈ ಅವರೊಂದಿಗೆ ಮಣಿಪಾಲ ವಿವಿಯ ಮಾಜಿ ಡೀನ್ ಹಾಗೂ ರಿಜಿಸ್ಟ್ರಾರ್ (ವೌಲ್ಯಮಾಪನ ವಿಭಾಗ) ಅಲ್ಲದೇ ಅನುಭವಿ ಪ್ರಾಧ್ಯಾಪಕ ಡಾ.ಪಿ.ಎಲ್.ಎನ್.ರಾವ್, ಮುಂಬಯಿಯ ಸಹಕಾರಿ ಕ್ಷೇತ್ರದ ಹಿರಿಯ ಬ್ಯಾಂಕರ್ ಜಾನ್ ಡಿಸಿಲ್ವ ಹಾಗೂ ಮುದ್ದಣ ಅಧ್ಯಯನ ಕೇಂದ್ರದ ಸ್ಥಾಪಕಾಧ್ಯಕ್ಷ ಹಾಗೂ ಸಮಾಜ ಸೇವಾಕರ್ತ ನಂದಳಿಕೆ ಬಾಲಚಂದ್ರ ರಾವ್ ಅವರಿಗೂ ಹೊಸ ವರ್ಷದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಡಾ.ಪಿ.ಎಲ್. ಎನ್.ರಾವ್ ಮಾತನಾಡಿ, ಸೇವೆಗಳಲ್ಲಿ ‘ವಿದ್ಯಾದಾನ’ವೇ ಅತ್ಯಂತ ಶ್ರೇಷ್ಠ ಎಂದು ನಾನು ಈಗಲೂ ನಂಬಿದ್ದೇನೆ. ‘ಅವನು’ ಬಯಸುವವರೆಗೆ ಈ ಸೇವೆಯಲ್ಲಿ ಮುಂದುವರಿಯಬೇಕೆಂಬುದು ನನ್ನ ಬಯಕೆಯಾಗಿದೆ ಎಂದರು.
ಇದೇ ಸಂದರ್ಭಗಳಲ್ಲಿ ತನ್ನ ಅಪಾರ ಅನುಭವದ ನೆಲೆಯಲ್ಲಿ ಸಹ ಅಧ್ಯಾಪಕರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ ಡಾ.ರಾವ್, ನೀವು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇ ಹೌದಾದರೆ, ನಿಮ್ಮ ಶಿಷ್ಯರು ನಿಮ್ಮನ್ನೆಂದಿಗೂ ಮರೆಯುವುದಿಲ್ಲ. ಇಂದಿಗೂ ಕರಿಹಲಗೆಯಲ್ಲಿ ಪಾಠ ಮಾಡುವುದು, ಪದವಿ ವಿದ್ಯಾರ್ಥಿಗಳಿಗೆ ಪಾಠ ಹೇಳುವುದು ಅತ್ಯುತ್ತಮ ಅನುಭವ, ವಿದ್ಯಾರ್ಥಿಗಳಿಗೆ ನಿಮ್ಮ ಸಹಾಯಹಸ್ತ ಬೇಕಾದ ನೀಡಲು ಎಂದಿಗೂ ಹಿಂಜರಿಯಬೇಡಿ, ವಿದ್ಯಾರ್ಥಿಗಳೊಂದಿಗೆ ಎಂದಿಗೂ ತಾರತಮ್ಯ ಮಾಡಬೇಡಿ ಎಂದರು.
ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರಿಯ ಜಿಎಂ ಸತೀಶ್ ಕಾಮತ್, ಮಣಿಪಾಲ ವಿವಿಯ ಕುಲಪತಿ ಡಾ.ಎಚ್.ವಿನೋದ್ ಭಟ್ ಉಪಸ್ಥಿತರಿದ್ದರು. ಮಣಿಪಾಲ ವಿವಿಯ ಪ್ರೊ ಚಾನ್ಸಲರ್, ಅಕಾಡೆಮಿಯ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಸ್ವಾಗತಿಸಿದರು , ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.