ಹೆಣ್ಣಿಗೆ ದೌರ್ಜನ್ಯವಾದಾಗ ಸಮಾಜ ನಿದ್ರಿಸುತ್ತದೆ: ಸಾಹಿತಿ ವೈದೇಹಿ

Update: 2017-01-14 18:15 GMT

ಬ್ರಹ್ಮಾವರ, ಜ.14: ಮಹಿಳೆಯರ ಸಮಸ್ಯೆಗಳು ಸಾರ್ವಕಾಲಿಕ. ಇಂದು ಕೂಡಾ ಅವರಿಗೆ ಸ್ವಾತಂತ್ರ ಸಿಕ್ಕಿಲ್ಲ. ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಅವಳನ್ನು ಬೆಳೆಸುತ್ತಿರುವುದು ದುರಂತವೇ ಸರಿ ಎಂದು ಖ್ಯಾತ ಸಾಹಿತಿ ವೈದೇಹಿ ಹೇಳಿದ್ದಾರೆ.

  ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಶನಿವಾರ 11ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರ ಸಮಕಾಲೀನ ಸಮಸ್ಯೆಗಳ ಕುರಿತು ನಡೆದ ಮಹಿಳಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಟಿವಿ ಧಾರಾವಾಹಿಗಳಲ್ಲಿ ಹೆಣ್ಣಿನ ವೌನ, ಲಜ್ಜೆ ಗುಣಗಳನ್ನು ಅವಹೇಳನ ಮಾಡಲಾಗುತ್ತಿದೆ. ಹೆಣ್ಣು ಭೋಗದ ವಸ್ತು ಎನ್ನುವ ಕಲ್ಪನೆಯನ್ನು ಅಳಿಸಿ, ಅವಳಿಗೂ ಸ್ವತಂತ್ರವಾದ ಜೀವನ ಇದೆ ಎನ್ನುವ ಭಾವನೆ ಮೂಡುವಂತಾಗಲಿ ಎಂದು ಅವರು ಹೇಳಿದರು.

ಸಾಹಿತಿ ಕುಂದಾಪುರದ ರೇಖಾ ವಿ. ಬನ್ನಾಡಿ ಮಾತನಾಡಿ, ಮಹಿಳೆಯು ಸಂಸಾರದ ಸಂಘೋಪನೆಯಲ್ಲಿ ಕಳೆದುಹೋಗುತ್ತಿದ್ದಾಳೆ. ಆರೋಗ್ಯ, ಶಿಕ್ಷಣ, ಆತ್ಮಸ್ಥೆರ್ಯವನ್ನು ಸಮಾಜ ನೀಡಿದರೆ ಹೆಣ್ಣು ಯಾವ ಸವಾಲನ್ನು ಸಹ ಸ್ವೀಕರಿಸಲು ತಯಾರಿದ್ದಾಳೆ ಎಂದರು.

ಈ ಸಂದರ್ಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಸುಲತಾ ವಿದ್ಯಾಧರ, ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಉಪನ್ಯಾಸಕಿ ವಿದ್ಯಾಲತಾ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.

ಅಭಿಲಾಷ ಸೋಮಯಾಜಿ ಸ್ವಾಗತಿಸಿ, ಗೀತಾ ಸಾಮಂತ್ ವಂದಿಸಿದರು. ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News