ಪಾಣೆಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ, ಯುವಕನೋರ್ವನಿಗೆ ಚೂರಿ ಇರಿತ

Update: 2017-01-15 03:44 GMT

ಬಂಟ್ವಾಳ, ಜ.15: ಹೊಟೇಲ್ ಮಾಲಕ ಮತ್ತು ಸ್ಥಳೀಯ ಯುವಕರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಮಾತಿನ ಚಕಮಕಿಯ ಸಂದರ್ಭದಲ್ಲಿ ಹೊಟೇಲ್ ಮಾಲಕ ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಪಾಣೆಮಂಗಳೂರು ಚಿಕನ್ ಕೆಫೆ ಆಂಡ್ ಫಿಶಾವಿ ಫ್ಯಾಮಿಲಿ ರೆಸ್ಟೋರೆಂಟ್ ಎದುರು ಶನಿವಾರ ತಡ ರಾತ್ರಿ ನಡೆದಿದೆ. 

ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮುಹಮ್ಮದ್ ನೌಫಲ್ (26) ಚೂರಿ ಇರಿತದಿಂದ ಗಾಯಗೊಂಡವರು. 

ಚೂರಿ ಇರಿದ ಹೊಟೇಲ್ ಮಾಲಕ ಮೆಲ್ಕಾರ್ ನಿವಾಸಿ ಅಹ್ಮದ್ ಬಾವ ಎಂಬವರ ಪುತ್ರ ಯಾಸೀನ್ (32) ಎಂಬಾತನನ್ನು ಘಟನಾ ಸ್ಥಳದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಚೂರಿ ಇರಿತಕ್ಕೊಳಗಾದ ಮುಹಮ್ಮದ್ ನೌಫಲ್ ಬಿ.ಸಿ.ರೋಡಿನ ಕೈಕಂಬದಲ್ಲಿ ರವಿವಾರ ಶುಭಾರಂಭಗೊಳ್ಳಲಿರುವ ತನ್ನ ಸಹೋದರನ ಅಂಗಡಿಗೆ ಕುರ್ಚಿ ತರಲು ಕೈಕಂಬದಿಂದ ಮೆಲ್ಕಾರ್ ಕಡೆಗೆ ಪಾಣೆಮಂಗಳೂರು ಮಾರ್ಗವಾಗಿ ಸ್ನೇಹಿತನ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಜೋರಾಗಿ ಸಂಗೀತ ನುಡಿಸಿದ್ದರು ಎನ್ನಲಾಗಿದೆ. 

ಆಟೋ ರಿಕ್ಷಾ ಹೊಟೇಲ್ ಎದುರಿನಿಂದ ಸಾಗುತ್ತಿದ್ದಾಗ ಜೋರಾಗಿ ಸಂಗೀತ ನುಡಿಸಿದಕ್ಕೆ ಯಾಸೀನ್, ನೌಫಲ್ ಮತ್ತು ಆತನ ಸ್ನೇಹಿತನೊಂದಿಗೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ಮೂವರ  ನಡುವೆ ಮಾತಿನ ಚಕಮಕಿ ನಡೆದಿದ್ದು ಸ್ಥಳದಲ್ಲಿದ್ದ ಯಾಸೀನ್ ನ ಸಹೋದರ ಯಾಸೀನ್ ನನ್ನು ಸಮಾಧಾನ ಪಡಿಸಿ ಹೊಟೇಲ್ ಒಳಗೆ ಕರೆದೋಯ್ದಿದ್ದ ಎನ್ನಲಾಗಿದೆ. 

ಬಳಿಕ ನೌಫಲ್ ಮತ್ತು ಸ್ನೇಹಿತ ಅದೇ ಮಾರ್ಗವಾಗಿ ಆಟೋ ರಿಕ್ಷಾದಲ್ಲಿ ಹಿಂದಿರುಗುತ್ತಿದ್ದಾಗ ಹೊಟೇಲ್ ಎದುರು ಅಡ್ಡಗಟ್ಟಿ ರಿಕ್ಷಾವನ್ನು ನಿಲ್ಲಿಸಿದ ಹೊಟೇಲ್ ಮಾಲಕ ಯಾಸೀನ್, ರಿಕ್ಷಾದಲ್ಲಿದ್ದ ನೌಫಲ್ ಮತ್ತು ಆತನ ಸ್ನೇಹಿತನ ಜೊತೆ ಮಾತಿನ ಚಕಮಕಿ ನಡೆಸಿದ್ದು ಇದು ಹೊಕೈ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಾಸೀನ್ ಹೊಟೇಲ್ ಒಳಭಾಗದಿಂದ ತರಕಾರಿ ಕೊಯ್ಯುವ ಚೂರಿ ತಂದು ನೌಫಲ್ ನ ಬೆನ್ನಿಗೆ ಇರಿದಿದ್ದಾನೆ ಎಂದು ತಿಳಿದು ಬಂದಿದೆ. 

ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಪಾಣೆಮಂಗಳೂರು ಮತ್ತು ನೆಹರುನಗರದ ಆಕ್ರೋಶಿತ ಯುವಕರು ಹೊಟೇಲ್ ನ ಗಾಜುಗಳನ್ನು ಪುಡಿಗೈದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಾಹಿತಿ ತಿಳಿದು ತಕ್ಷಣ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಸ್ಥಳದಲ್ಲಿ ಜಮಾಯಿಸಿದ ಯುವಕರನ್ನು ಚದುರಿಸಿ ಹೊಟೇಲ್ ಬಾಗಿಲು ಮುಚ್ಚಿಸಿ ಪರಿಸ್ಥಿತಿ ಹತೋಟಿಗೆ ತಂದರು. 

ಚೂರಿ ಇರಿತಕ್ಕೊಳಗಾದ ನೌಫಲ್ ಗೆ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯ ಬಳಿಕ ಇದೀಗ ನೌಫಲ್ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News