ಅವಳಿ ಮಸೀದಿಗೆ ದುಷ್ಕರ್ಮಿಗಳಿಂದ ಕಲ್ಲೆಸೆತ

Update: 2017-01-15 18:43 GMT

ಮುಲ್ಕಿ, ಜ.15: ಇಲ್ಲಿನ ಅವಳಿ ಮಸೀದಿಗಳಾದ ಹಳೆಯಂಗಡಿ ಸಮೀಪದ ಕದಿಕೆ ಹೊಸಂಗಡಿ ಕೇಂದ್ರ ಜುಮಾ ಮಸೀದಿಗೆ ಒಳಪಟ್ಟಿರುವ ಹಳೆಯಂಗಡಿ ಪಂಡಿತ್ ಹರಿಭಟ್ ರಸ್ತೆಯಲ್ಲಿರುವ ಸಂತೆಕಟ್ಟೆ ಜುಮಾ ಮಸೀದಿ ಮತ್ತು ಕೊಲ್ನಾಡು ಕೆ.ಎಸ್.ರಾವ್ ನಗರದ ಶಾಫಿ ಜುಮಾ ಮಸೀದಿಗಳಿಗೆ ಶನಿವಾರ ತಡರಾತ್ರಿ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.

 ಸಂತೆಕಟ್ಟೆ ಮಸೀದಿಯ ಮುಂಭಾಗದ ದೊಡ್ಡ ಗಾಜಿನ ಬಾಗಿಲು ಹಾಗೂ ಮರದ ಬಾಗಿಲಿಗೆ ಅಳವಡಿಸಲಾಗಿದ್ದ ಸಣ್ಣ ಗಾಜುಗಳನ್ನು ಮಸೀದಿಯ ಒಳ ಪ್ರವೇಶಿಸಿ ಹತ್ತಿರದಿಂದಲೇ ಕಲ್ಲುಗಳಿಂದ ಹೊಡೆದು ಹಾಕಿದ್ದು, ಮಸೀದಿ ಒಳಭಾಗದಲ್ಲಿ ಮೂರು ಕಲ್ಲುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

 ಶನಿವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ಮಸೀದಿಯ ಮುಂಭಾಗದಿಂದ ಸದ್ದು ಕೇಳಿಸಿತ್ತು ಮತ್ತು ವಾಹನದ ಲೈಟ್ ಹಾಕಲಾಗಿತ್ತು. ಆದರೆ, ಭಯದಿಂದ ಹೊರಬಂದು ನೋಡಿಲ್ಲ ಎಂದು ಮಸೀದಿಯ ಒಳಗಿನ ಕೊಠಡಿಯಲ್ಲಿ ಮಲಗಿದ್ದ ಮುಸ್ಲಿಯಾರ್ ಒಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

 ದುಷ್ಕರ್ಮಿಗಳ ಕೃತ್ಯದಿಂದ ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ಮಸೀದಿಯ ಸಮಿತಿ ಅಧ್ಯಕ್ಷ ಅಬ್ದುರ್ರಝಾಕ್ ಮೂಡುತೋಟ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂತೆಕಟ್ಟೆ ಮಸೀದಿಯ ಮುಂಭಾಗದಲ್ಲಿ ಜನರು ಜಮಾವಣೆಗೊಂಡಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಬಳಿಕ ಮುಲ್ಕಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಪಧ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಸಮಿತಿಯ ಅಧ್ಯಕ್ಷರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಮಾಹಿತಿ ಕಲೆಹಾಕಿದರು. ಅಲ್ಲದೇ, ಶೀಘ್ರ ಅಪರಾಧಿಗಳ ಬಂಧನ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

*ಕೆಎಸ್ ರಾವ್ ನಗರ ಮಸೀದಿಗೂ ಕಲ್ಲು: ಮುಲ್ಕಿ ಠಾಣಾ ವ್ಯಾಪ್ತಿಗೆ ಒಳಪಡುವ ಮುಲ್ಕಿ ಕೆಎಸ್ ರಾವ್ ನಗರದ ಶಾಫಿ ಜುಮಾ ಮಸೀದಿಗೂ ಕಲ್ಲು ಎಸೆದಿರುವ ದುಷ್ಕರ್ಮಿಗಳು ಮಸೀದಿಯ ಪ್ರವೇಶ ದ್ವಾರದ ಕಮಾನಿನ ಬಳಿ ಕಿಟಕಿ ಬಾಗಿಲಿಗೆ ಹಾನಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಕೆಎಸ್ ರಾವ್ ನಗರದ ಶಾಲೆಯೊಂದರಲ್ಲಿ ವಾರ್ಷಿಕೋತ್ಸವ ನಡೆದಿದ್ದು, ಇಲ್ಲಿಗೆ ಆಗಮಿಸಿ ಹಿಂದಿರುಗುವ ವೇಳೆ ಬೇಕೆಂದೇ ಮಸೀದಿಗೆ ಕಲ್ಲೆಸೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸುಮಾರು ಮೂರು ಬೈಕ್‌ಗಳಲ್ಲಿ ಬಂದ ತಂಡ ಕೃತ್ಯ ಎಸಗಿರುವ ಶಂಕೆ ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ್ದು, ಮಸೀದಿ ಸಮೀಪದಲ್ಲಿ ಮೂರು ಬೈಕ್‌ಗಳು ನಿಂತಿರುವುದನ್ನು ವಾರ್ಷಿಕೋತ್ಸವ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸ್ಥಳೀಯರು ಕಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಸೀದಿಯ ಅಧ್ಯಕ್ಷ ಅಹ್ಮದ್ ಬಾವಾ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ವಾರದೊಳಗೆ ಅಪರಾಧಿಗಗಳ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಶಾಸಕ ಅಭಯ ಚಂದ್ರ ಸ್ಥಳಕ್ಕೆ ಭೇಟಿ

ಘಟನಾ ಸ್ಥಳಗಳಿಗೆ ಮುಲ್ಕಿ ಮೂಡುಬಿದಿರೆ ಶಾಸಕ ಅಭಯ ಚಂದ್ರ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಿಡಿಗೇಡಿಗಳು ಇಂತಹಾ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಮುಸ್ಲಿಮರು ಸಹನೆ ಕಳೆದು ಕೊಳ್ಳಬಾರದು ಎಂದು ವಿನಂತಿಸಿದರು. ಸ್ಥಳದಲ್ಲೇ ಇಲಾಖೆಯ ವೃತ್ತ ನಿರೀಕ್ಷಕರು ಮತ್ತು ಎಸಿಪಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು, ಶೀಘ್ರ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಶಾಸಕರೊಂದಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕೆಪಿಸಿಸಿ ಮತ್ತು ಮೂಡಾ ಸದಸ್ಯ ವಸಂತ್ ಬೆರ್ನಾರ್ಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್, ಹಳೆಯಂಗಡಿ ಗ್ರಾಪಂ ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್ ಇಂದಿರಾ ನಗರ, ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ಕದಿಕೆ ಮೊದಲಾದವರಿದ್ದರು.

ಸ್ಥಳೀಯರ ಕೃತ್ಯ ಶಂಕೆ

 ಶನಿವಾರ ರಾತ್ರಿ ದುಷ್ಕರ್ಮಿಗಳ ಕೃತ್ಯಕ್ಕೆ ಒಳಗಾದ ಸಂತೆಕಟ್ಟೆ ಹಾಗೂ ಕೆ.ಎಸ್.ರಾವ್ ನಗರದ ಎರಡೂ ಮಸೀದಿಗಳು ಹೆದ್ದಾರಿಯಿಂದ ಸುಮಾರು 3-4 ಕಿ.ಮೀ. ದೂರದಲ್ಲಿವೆ. ಆದರೂ ಮಸೀದಿಗಳಿಗೆ ಕಲ್ಲು ಹೊಡೆದು ಹಾನಿಗೊಳಿಸಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಸ್ಥಳೀಯವಾಗಿ ಮಸೀದಿಗಳ ದಾರಿಗಳನ್ನು ಬಲ್ಲವರೇ ಈ ಕೃತ್ಯ ಎಸಗಿರುವ ಬಗ್ಗೆ ಸ್ಥಳೀಯರು ಸಹಿತ ಪೊಲೀಸರೂ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂತೆಕಟ್ಟೆ ಮಸೀದಿಯಾಗಿ ಹಾದು ಹೋಗುವ ಬ್ಯಾಂಕ್ ಹಾಗೂ ಬಾರ್‌ಗಳ ಸಿಸಿಟಿವಿ ಫೂಟೇಜ್‌ಗಳನ್ನು ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‌ನ ಪೊಲಿಸರು ಪರಿಶೀಲಿಸಿ ಮಹತ್ವದ ಸುಳಿವು ಕಲೆಹಾಕಿದ್ದು, ಸ್ಥಳಿಯರೇ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸಿಸಿಬಿ ಅಧಿಕಾರಿಗಳಿಂದ ಪರಿಶೀಲನೆ

 ಪ್ರಕರಣ ಸಂಬಂಧ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‌ನ ತಂಡ ಮುಲ್ಕಿ ಪೊಲೀಸರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಅಲ್ಲದೇ, ಸಂತೆಕಟ್ಟೆ ಮಸೀದಿ ಸಮೀಪದ ಬ್ಯಾಂಕ್ ಹಾಗೂ ಬಾರ್‌ವೊಂದರ ಸಿಸಿ ಟಿವಿ ಫೂಟೇಜ್‌ಗಳನ್ನು ಪಡೆದುಕೊಂಡು ತನಿಖೆ ಆರಂಭಿಸಿದ್ದು, ಮಹತ್ವದ ಸುಳಿವು ಲಭ್ಯವಾಗಿದೆ ಎಂಬ ಮಾಹಿತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News