ಟ್ಯಾಕ್ಸಿ ಚಾಲಕರಿಗೆ ಬಿಪಿಎಲ್ ಕಾರ್ಡ್: ಯು.ಟಿ ಖಾದರ್

Update: 2017-01-15 05:17 GMT

ಪಡುಬಿದ್ರಿ, ಜ.15: ಜೀವನ ನಿರ್ವಹಣೆಗಾಗಿ ಟ್ಯಾಕ್ಸಿಯನ್ನೇ ಅವಲಂಭಿಸಿರುವ ಚಾಲಕರಿಗೆ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಅವರು ಶನಿವಾರ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್‌ನ ಪಡುಬಿದ್ರಿ ಘಟಕದ ರಜತ ಮಹೋತ್ಸವದ ಅಂಗವಾಗಿ ಬೋರ್ಡ್ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಸಂಚಾರಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗುರುತು ಕಾರ್ಡ್ ಬಿಡುಗಡೆ ಮಾಡಿದ ವಿಧಾನಪರಿಷತ್‌ನ ಸಚೇತಕ ಐವನ್ ಡಿಸೋಜ, ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುವ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಭದ್ರತೆ ಇಲ್ಲ. ಅದಕ್ಕಾಗಿ ಸರಕಾರ ನಿಯಮಾವಳಿಗಳಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ ಎಂದು ಸಮಾಜದ ಜೊತೆ ಸೌಹಾರ್ದತೆಯಿಂದ ಬದುಕುವ ಟ್ಯಾಕ್ಸಿ ಚಾಲಕರು ಅ ಭಾಗದ ರಾಯಭಾರಿಗಳು. ಚಾಲಕರಿಗೆ ಸಮವಸ್ತ್ರ ರಕ್ಷಣೆಯ ಸಂಕೇತ. ಸಮವಸ್ತ್ರ ಧರಿಸಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ. ಗುಣಮಟ್ಟದ ಸೇವೆ ನೀಡಿದಲ್ಲಿ ಸಮಾಜದಲ್ಲಿ ಬದುಕಲು ಸಾಧ್ಯ. ಪಡುಬಿದ್ರಿಯಲ್ಲಿ ಕಾರು ಹಾಗೂ ಅಟೋ ಚಾಲಕರಿಗೆ ಸುಸಜ್ಜಿತ ನಿಲ್ದಾಣ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡುವುದಾಗಿ ಅವರು ಘೋಷಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಗುಣವಾಗಿ ಸಂಚಾರ ವ್ಯವಸ್ಥೆಯನ್ನು ಉನ್ನತಿಗೊಳಿಸುವ ಯೋಜನೆ ಇದೆ. ಜನರ ನಿರೀಕ್ಷೆಗನುಗುಣವಾಗಿ ಅವು ಬೆಳವಣಿಗೆಗಳಾಗಬೇಕು. ಸಸಿಹಿತ್ಲಿನಿಂದ ಹೆಜಮಾಡಿಯನ್ನು ಸೇರಿಸಿಕೊಂಡು ಬೋಟ್‌ಕ್ಲಬ್ ನಿರ್ಮಾಣಕ್ಕೆ ಅಂದಾಜುಪಟ್ಟಿ ಸಿದ್ದಪಡಿಸಲಾಗಿದೆ. ಪಡುಬಿದ್ರಿ ಆಸುಪಾಸಿನಲ್ಲಿ ಸ್ಥಾಪನೆಯಾದ ಉದ್ದಿಮೆಗಳಿಂದ ಜನಜೀವನ ತಲ್ಲಣಗೊಳಿಸುವ ಕೆಲಸವಾಗಿದೆ. ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ಸೂಕ್ತ ಸ್ಥಳವನ್ನು ಗುರುತಿಸಿ ಕಾರು ಹಾಗೂ ಅಟೋ ನಿಲ್ದಾಣವನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗುರುಪ್ರಸಾದ್ ಹೆಗ್ಡೆ, ಸೋನಿ ಶೆಟ್ಟಿ, ಮುತ್ತು ಮಡಿವಾಳ್ತಿ, ವೈ. ಸುಕುಮಾರ್, ಶರತ್ ಶೆಟ್ಟಿ, ರಕ್ಷತ್ ಆರ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಅಶಕ್ತ 18 ಜನರಿಗೆ ಹಾಗೂ ಸಂಘದ ಸದಸ್ಯರಾಗಿದ್ದು ನಿಧನರಾಗಿರುವ 4 ಜನ ಚಾಲಕರ ಕುಟುಂಬದವರಿಗೆ ಸಹಾಯಧನ, ನೇತ್ರ ಚಿಕಿತ್ಸಾ ಶಿಬಿರದ ಫಲಾನುಭವಿಗಳಿಗೆ ಕನ್ನಡಕ ಹಾಗೂ ಸಂಚಾರಿ ಸಂಭ್ರಮದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್‌ನ ಅಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ದಿನೇಶ್ ಕೋಟ್ಯಾನ್, ಮೈಕಲ್ ರಮೇಶ್ ಡಿಸೋಜ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಮಯಂತಿ ವಿ ಅಮೀನ್, ಜಿತೇಂದ್ರ ಪುಟಾರ್ಡೋ, ಗ್ರಾಮ ಪಂಚಾಯಿತಿ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ. ಸುಧೀರ್‌ಕುಮಾರ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬ್ಲಾಕ್ ಕಾಂಗ್ರೆಸ್ ಕಾಪು ದಕ್ಷಿಣ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಚಾಲಕ ಇಕ್ಬಾಲ್ ಅಹ್ಮದ್ ಮೂಲ್ಕಿ, ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ, ಸುರೇಶ್ ಶೆಟ್ಟಿ ಉಳ್ಳೂರು, ಗಣೇಶ್ ಶೆಟ್ಟಿ ಸಾಂತೂರು, ಕಿಶೋರ್ ಪೂಜಾರಿ ಎರ್ಮಾಳು, ರವೀಂದ್ರ ಪ್ರಭು, ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಎ. ರಹಿಮಾನ್, ಟೆಂಪೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹರೀಶ್ ಕೆ ಶೆಟ್ಟಿ, ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ಅಸೋಸಿಯೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಪಡುಬಿದ್ರಿ ಘಟಕದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕೌಸರ್, ಜಂಟಿ ಕಾರ್ಯದರ್ಶಿ ಪಿ. ಮಹಮ್ಮದ್, ಕೋಶಾಧಿಕಾರಿ ಆನಂದ ಎಂ ಪೂಜಾರಿ, ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಯ ಸಾಲ್ಯಾನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News