ಹತಾಶಮನೋಭಾವ ತೊರೆದು ಸಮಾಜದ ಹಿತಕ್ಕಾಗಿ ಕೆಲಸ ಮಾಡೋಣ: ಡಾ.ಬಿ.ಟಿ.ಲಲಿತಾ ನಾಯಕ್
ಮಂಗಳೂರು,ಜ.15: ಇಂದಿನ ರಾಜಕೀಯ ಚಿಂತನಾಗತಿಯೇ ನಕಾರಾತ್ಮಕವಾಗಿದೆ. ಅದೊಂದು ಕೆಟ್ಟ ಕಾರ್ಯವೆಂಬಂತೆ ಸಜ್ಜನರು ಯೋಚಿಸುವ ರೀತಿಯಲ್ಲಿ ರಾಜಕಾರಣಿಗಳು ವರ್ತಿಸುತ್ತಿದ್ದಾರೆ. ಧರ್ಮ, ದೇವರುಗಳು ಕೂಡಾ ಮಾರಾಟದ ವಸ್ತು ಆಗಿವೆ. ಇದರಿಂದ ದೇಶವನ್ನು ಪಾರು ಮಾಡುವ ಅಗತ್ಯವಿದೆ. ಆದ್ದರಿಂದ ನಾವು ಸಕಾರಾತ್ಮ ಚಿಂತನೆಗಳನ್ನು ಬೆಳೆಸಿಕೊಂಡು ರಾಜಕೀಯ ಕ್ಷೇತ್ರವನ್ನು ಮೌಲ್ಯಾಧಾರಿತವಾಗಿ ಕಟ್ಟಿ ಬೆಳೆಸೋಣ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷೆ ಡಾ.ಬಿ.ಟಿ.ಲಲಿತಾನಾಯಕ್ ಹೇಳಿದ್ದಾರೆ.
ಅವರು ರವಿವಾರ ಮಂಗಳೂರಿನ ಹಿದಾಯತ್ ಸೆಂಟರ್‍ನಲ್ಲಿ ನಡೆದ ವೆಲ್ಫೇರ್ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ಪ್ರತಿಯೊಬ್ಬನಿಗೂ ರಾಜಕೀಯದ ಬಗ್ಗೆ ಗೊತ್ತು ಗುರಿ ಇರಬೇಕು. ಆಗ ಮಾತ್ರ ನಮ್ಮ ನಾಡನ್ನು ಭ್ರಷ್ಟಾಚಾರಿಗಳ ಕಪಿಮುಷ್ಠಿಯಿಂದ ಪಾರು ಮಾಡಲು ಸಾಧ್ಯ. ಯಾವುದೇ ಸರಕಾರಗಳು ತಪ್ಪೆಸೆಗಿದಾಗ ತಿದ್ದುವ ಕೆಲಸ ಪ್ರಜೆಗಳಿಂದ ಆಗಬೇಕಾಗಿದೆ. ನಾವು ಹತಾಶ ಮನೋಭಾವ ಬಿಟ್ಟು ಸಕ್ರಿಯವಾಗಿ ಕೆಲಸ ಮಾಡೋಣ, ರಾಜಕೀಯ ಬದ್ಧತೆಯಿಂದಲೇ ಸರಕಾರಗಳೆಸಗುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ ಎಂದು ಕಾರ್ಯಕರ್ತರಿಗೆ ಅವರು ಸಲಹೆ ನೀಡಿದರು.
ಬದಲಾವಣೆಗಳ ಬಗ್ಗೆ ನಾವು ಆಶಾವಾದಿಯಾಗೋಣ, ಕೆಟ್ಟ ಪರಿಸ್ಥಿತಿ ಶಾಶ್ವತವಲ್ಲ. ನಾವು ನಿರಂತರ ಉತ್ತಮ ವಾತಾವರಣಕ್ಕಾಗಿ ಶ್ರಮಿಸಬೇಕಿದೆ. ವೆಲ್ಫೇರ್ ಪಾರ್ಟಿ ಇಂಡಿಯಾದ ಉದ್ದೇಶವೇ ಇದಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ, ರಚನಾತ್ಮಕ ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುತ್ತಿದೆ. ಸಮಾಜದ ಸುಧಾರಣೆಗಾಗಿ ಬಲಿಷ್ಠವಾಗಿ ಹೋರಾಟ ನಡೆಸುತ್ತಿದೆ. ಯಾಕೆಂದರೆ ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ಇರಬೇಕೆಂಬುದು ನಮ್ಮ ಆಶಾಭಾವನೆಯಾಗಿದೆ ಎಂದು ಹೇಳಿದರು.
ಎಲ್ಲ ರಾಜಕಾರಿಣಿಗಳು ಮತ್ತು ರಾಜಕೀಯ ಪಕ್ಷಗಳು ಕೆಟ್ಟವರಲ್ಲ. ಇಲ್ಲಿ, ಪಕ್ಷಗಳು ಸೇವಾ ಮನೋಭಾವದಿಂದ ಹುಟ್ಟಿಕೊಂಡಿವೆ. ಕ್ರಮೇಣ ಪಕ್ಷಗಳನ್ನು ನಾವೇ ಕೆಡಿಸಿದೆವು ಎಂದ ಅವರು, ಎಲ್ಲ ಧರ್ಮಗಳು ಸಹಿಷ್ಣು ಮತ್ತು ಸಮಾಜಪ್ರಿಯವಾಗಿವೆ. ಅವುಗಳನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸುತ್ತಿರುವುದರಿಂದ ತೊಂದರೆ ಆಗುತ್ತಿದೆ. ಸ್ವಾರ್ಥವನ್ನು ತೊರೆದು ಸರ್ವಜನ ಹಿತವನ್ನು ಬಯಸೋಣ. ಯಾರನ್ನೂ ನಾವು ಕೆಟ್ಟವರು ಎನ್ನುವಂತಿಲ್ಲ. ಬ್ರಿಟಿಷರು ಭಾರತಕ್ಕೆ ಬರೇ ಕೆಟ್ಟದ್ದನ್ನು ಮಾತ್ರವಲ್ಲ, ಒಳ್ಳೆಯ ಕೆಲಸವನ್ನೂ ಮಾಡಿದ್ದಾರೆ. 1845ರಲ್ಲಿ ಲಾರ್ಡ್ ಮೆಕಾಲೆ ದೇಶದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಘೋಷಿಸಿದ್ದಾನೆ. ನಾವು ಎಲ್ಲರ ಒಳ್ಳೆಯ ಕೆಲಸಗಳನ್ನು ಗುರುತಿಸೋಣ ಮತ್ತು ಸಹಕರಿಸೋಣ ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆನೀಡಿದರು