×
Ad

ಝಕಾತ್ ಚಾರಿಟೇಬಲ್ ಟ್ರಸ್ಟ್‌ನಿಂದ 1,828 ವಿದ್ಯಾರ್ಥಿಗಳಿಗೆ 97.36 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನ ವಿತರಣೆ

Update: 2017-01-15 15:13 IST

ಮಂಗಳೂರು, ಜ.15: ಕರ್ನಾಟಕ ಝಕಾತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಲೊಯಲಾ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 97,36,200 ರೂ. ಮೊತ್ತದಲ್ಲಿ 1,828 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ದ.ಕ. ಮತ್ತು ಉಡುಪಿ ಜಿಲ್ಲೆಯ ಪಿಯುಸಿ ಯಿಂದ ಪದವಿ ಹಾಗೂ ಪಿಎಚ್‌ಡಿ ವರೆಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಖಲೀಲ್ ಅಹ್ಮದ್, ವಿದ್ಯಾರ್ಥಿವೇತನಕ್ಕೆ ಈ ಬಾರಿ ರಾಜ್ಯಾದಂತ 7,000 ಅರ್ಜಿಗಳು ಬಂದಿದ್ದು, ಈ ಪೈಕಿ 6,000 ಅರ್ಜಿಗಳನ್ನು ಸ್ವೀಕರಿಸಿ ಸುಮಾರು 3.5 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ ಎಂದರು. ಕಳೆದ ವರ್ಷದಲ್ಲಿ ರಾಜ್ಯದಲ್ಲಿ 5,600 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಗಿದೆ. ಈ ಬಾರಿ ಶೇ. 15ರಷ್ಟು ಹೆಚ್ಚುವರಿ ಅರ್ಜಿಗಳು ಬಂದಿದ್ದವು ಎಂದು ಖಲೀಲ್ ಅಹ್ಮದ್ ಮಾಹಿತಿ ನೀಡಿದರು.

ಅತಿಥಿಯಾಗಿ ಮಾತನಾಡಿದ ತೆಲಂಗಾಣ ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎ.ಕೆ.ಖಾನ್, ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವು ಹಿಂದುಳಿದಿದ್ದು, ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸಮುದಾಯವು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ. ಶಿಕ್ಷಣಕ್ಕೆ ಇಸ್ಲಾಂ ಧರ್ಮವು ಹೆಚ್ಚಿನ ಮಹತ್ವ ನೀಡಿದ್ದು, ವಿಶೇಷವಾಗಿ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಗಲ್ಫಾರ್ ಎಂಜನಿಯರಿಂಗ್‌ನ ಸ್ಥಾಪಕಾಧ್ಯಕ್ಷ ಪಿ.ಮುಹಮ್ಮದ್ ಅಲಿ ಮಾತನಾಡಿ, ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಳ್ಳುವಂತಾಗಬೇಕು. ಇದಕ್ಕಾಗಿ ತಮ್ಮ ಗುಣ, ನಡತೆಯಲ್ಲಿ ಬದಲಾವಣೆ ಅಗತ್ಯವಾಗಿದೆ. ಹೆತ್ತವರು ಹಾಗೂ ಹಿರಿಯರನ್ನು ಗೌರವಿಸುತ್ತಾ ಉತ್ತಮ ಬಾಂಧವ್ಯವವನ್ನು ವೃದ್ಧಿಸಿಕೊಳ್ಳಬೇಕು. ಈ ಮೂಲಕ ನಮ್ಮ ಉತ್ತಮ ಕೆಲಸಗಳಿಗೆ ಸಮಾಜವು ನಮನ್ನು ಗುರುತಿಸಿಕೊಳ್ಳುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬ್ಯಾರೀಸ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಸಿಗ್ಮಾ ಫೌಂಡೇಶನ್‌ನ ಅಮೀನ್ ಮುದಸ್ಸರ್, ಎನ್‌ಆರ್‌ಐ ಉದ್ಯಮಿ ಸುಬ್ಬು ಕುಟ್ಟ, ಕರ್ನಾಟಕ ಝಕಾತ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಶಾಹಿದ್ ಅಲಿ ಖಾನ್, ಮುಜಾಹಿದ್ ಫಾರೂಖಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News