ಶ್ರಮದ ಹಣವನ್ನು ಅಣಕಿಸುವ ಅಸಹ್ಯಕರ ಐಶ್ವರ್ಯದ ಪ್ರದರ್ಶನಕ್ಕೆ ಕಡಿವಾಣ ಅಗತ್ಯ: ಸಚಿವ ರಮೇಶ್ ಕುಮಾರ್
ಉಡುಪಿ, ಜ.15: ಈ ದೇಶದಲ್ಲಿ ನಗದು ಇಲ್ಲದಿದ್ದರೂ ಜನಾರ್ದನ ರೆಡ್ಡಿಯಂತವರ ಮಗಳ ಮದುವೆ ನಡೆಯುತ್ತದೆ. ಮದುವೆಗಾಗಿ ಈ ರೀತಿ ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡುವುದೇ ಕಪ್ಪು ಹಣದ ದುರಾಹಂಕಾರ. ಈ ಹಣವು ಅಧಿಕೃತವಾಗಿ ಶ್ರಮದ ಬೆವರಿನಿಂದ ಸಂಪಾದನೆ ಮಾಡಿದ ಹಣವನ್ನು ಹಿಯಾಳಿಸುತ್ತದೆ, ಅಪಮಾನಗೊಳಿಸುತ್ತದೆ ಮತ್ತು ಅಣುಕಿಸುತ್ತದೆ. ಇಂತಹ ಅಪೇಕ್ಷಣೀಯ ಹಾಗೂ ಅಸಹ್ಯಕರವಾದ ಐಶ್ವರ್ಯ ಪ್ರದರ್ಶನಕ್ಕೆ ಈ ದೇಶದಲ್ಲಿ ಕಡಿವಾಣ ಹಾಕಬೇಕಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಟ ಶಿವರಾಮ ಥೀಂ ಪಾಕ್‌ನಲ್ಲಿ ರವಿವಾರ ಕೋಟತಟ್ಟು ಗ್ರಾಪಂನ ನಗದು ರಹಿತ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ರಿಸರ್ವ್ ಬ್ಯಾಂಕ್ ಪ್ರಕಾರ ಭಾರತದಲ್ಲಿ 2015ರ ಮಾ.31ರವರಗೆ 6.58ಲಕ್ಷ ಕೋಟಿ ರೂ. ವಸೂಲಿ ಮಾಡಲು ಆಗದ ಸಾಲ ಇದೆ. ಇದು ಕರ್ನಾಟಕ ರಾಜ್ಯದ ಬಜೆಟ್(1.10ಲಕ್ಷ ಕೋಟಿ.)ನ ಆರು ಪಟ್ಟು ಹೆಚ್ಚು. ಇಷ್ಟು ಪ್ರಮಾಣದ ಹಣವನ್ನು ದೇಶದ 1000 ಜನ ಕಬಳಿಸಿದ್ದಾರೆ. ಈ ಬಗ್ಗೆ ಜಾಗೃತರಾಗಿ ಇಂತಹ ಜನರನ್ನು ನಿಯಂತ್ರಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಎರಡು ಸಾವಿರ ರೂ. ಮುಖಬೆಲೆಯ ನೋಟಿನಿಂದ ಕಳ್ಳರಿಗೆ ಹಣ ಬಚ್ಚಿಟ್ಟು ಕೊಳ್ಳಲು ಇನ್ನು ಸುಲಭ ಆಗಿದೆ. ಇದು ಟೀಕೆ ಅಲ್ಲ, ಆತಂಕ. ಕಾಳಧನಿಕರಿಗೆ ಪಕ್ಷ, ಧರ್ಮ, ಜಾತಿ, ಕುಲ ಎಂಬುದಿಲ್ಲ. ಇವರು ಅಮಾನವೀಯ ಜನ. ಇವರನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆ ಎಳೆಯಬೇಕಾಗಿದೆ. ದುಂದುವೆಚ್ಚವನ್ನು ನಿಯಂತ್ರಿಸುವುದು, ರಿಸರ್ವ್ ಬ್ಯಾಂಕಿನಿಂದ ಚಲಾವಣೆಗೆ ಬಂದ ಹಣಕ್ಕೆ ಗೌರವ ಕೊಡುವುದು, ಮುದ್ರಣಗೊಂಡ ಹಣದ ಲೆಕ್ಕ ಇಟ್ಟು ಕೊಳ್ಳುವುದು ದೇಶದ ಆರ್ಥಿಕ ವ್ಯವಸ್ಥೆಗೆ ಆರೋಗ್ಯ ಎಂದರು.
ಕಪ್ಪುಹಣ ಮುಕ್ತ ರಾಷ್ಟ್ರ: ಕಪ್ಪುಹಣವು ಈ ದೇಶದ ಕಾನೂನಿಗೆ ಗೌರವ ಕೊಡುವ ಜನರಿಗೆ ಮಾಡುವ ಅಪಮಾನ ಹಾಗೂ ಅದು ದೇಶಕ್ಕೆ ದೊಡ್ಡ ಶಾಪ. ಕಪ್ಪುಹಣದ ವಿರುದ್ಧ ಸಮರ ಸಾರಬೇಕಾಗಿದೆ. ಇದರಲ್ಲಿ ನಾವೆಲ್ಲ ಯೋಧರಾಗಿ ಕೆಲಸ ಮಾಡಬೇಕು. ಆ ಮೂಲಕ ಈ ದೇಶವನ್ನು ಕಪ್ಪುಹಣ ಮುಕ್ತವನ್ನಾಗಿಸಬೇಕು. ಇದರಿಂದ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
ಅಮೆರಿಕಾದ ಒಂದು ಡಾಲರ್ ಮುಂದೆ ನಮ್ಮದು 62ರೂ. ಆಗುತ್ತದೆ. ಇದರಿಂದ ಗೊತ್ತಾಗುತ್ತದೆ ನಾವು ತುಂಬಾ ಕೆಳಗೆ ಇದ್ದೇವೆ ಎಂಬುದು. ಜಗತ್ತಿನ ಎಲ್ಲ ದೇಶಗಳ ಹಣದ ಮುಂದೆ ನಮ್ಮ ಹಣದ ಮೌಲ್ಯ ಸಮಾನವಾದಾಗ ಮಾತ್ರ ದೇಶದ ಕೀರ್ತಿ ಹೆಚ್ಚಾಗುತ್ತದೆಯೇ ಹೊರತು ಭಾರತ ಮಾತೆಯ ಚಿತ್ರಕ್ಕೆ ಕಿರೀಟ ತೊಡಿಸಿ ಕೈಯಲ್ಲಿ ಬಾವುಟ ಕೊಟ್ಟು ವಂದೇ ಮಾತರಂ ಹೇಳಿ ಆರತಿ ಎತ್ತಿದ್ದರೆ ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.
ನಗದು ರಹಿತ ಮೂಲಕ ಕೋಟತಟ್ಟು ಗ್ರಾಪಂ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ಕುರಿತು ಗ್ರಾಮಾಣಾಬಿವೃದ್ಧಿ ಸಚಿವ ಎಚ್.ಕೆ.ಪಾಟೀಲ ರೊಂದಿಗೆ ಚರ್ಚಿಸಿ ಅಧಿಕಾರಗಳ ತಂಡವನ್ನು ಇಲ್ಲಿಗೆ ಕಳುಹಿಸಿ ವರದಿ ನೀಡುವಂತೆ ಮಾಡಿ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಎರಡೆರಡು ಮಾದರಿ ಗ್ರಾಪಂಗಳನ್ನು ಆಯ್ಕೆ ಮಾಡುವ ಕಾರ್ಯ ಮಾಡಲಾಗುವುದು ಎಂದರು.
ನಗದು ರಹಿತ ಗ್ರಾಪಂ: ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕೋಟತಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 1032 ಕುಟುಂಬಗಳಿದ್ದು, ಈ ಬಗ್ಗೆ ಸರ್ವೆ ನಡೆಸಿದಾಗ ಇದರಲ್ಲಿ 200 ಕುಟುಂಬ ಗಳಿಗೆ ಡೆಬಿಟ್ ಕಾರ್ಡ್ ಮತ್ತು 20 ಕುಟುಂಬಗಳಲ್ಲಿ ಬ್ಯಾಂಕ್ ಖಾತೆ ಇರಲಿಲ್ಲ. ಇದೀಗ ಎಲ್ಲ ಕುಟುಂಬಗಳಿಗೆ ಬ್ಯಾಂಕ್ ಖಾತೆ ಮಾಡಿಸಿ ಕಾರ್ಡ್ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ನಾಳೆಯಿಂದ ಈ ಎಲ್ಲ ಕುಟುಂಬಗಳು ಕಟ್ಟಡ, ಉದ್ದಿಮೆ, ಮನೆ ನಿರ್ಮಾಣ ಲೈಸೆನ್ಸ್, ಮನೆ ತೆರಿಗೆ, ನೀರಿನ ತೆರಿಗೆ ಸೇರಿದಂತೆ ಎಲ್ಲಾ ಶುಲ್ಕಗಳನ್ನು ನಗದು ರಹಿತವಾಗಿಯೇ ಪಾವತಿಸಲಿದೆ. ಈ ಎಲ್ಲ ಶುಲ್ಕದಿಂದ ಗ್ರಾಪಂಗೆ ವರ್ಷಕ್ಕೆ 20ಲಕ್ಷ ರೂ. ಆದಾಯ ಬರುತ್ತದೆ ಎಂದು ಅವರು ಹೇಳಿದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯ ರಾಘವೇಂದ್ರ ಕಾಂಚನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಕುಂದಾಪುರ ತಾಪಂ ಕಾರ್ಯ ನಿರ್ವಹಣಾಧಿ ಕಾರಿ ಚೆನ್ನಪ್ಪಮೊಲಿ, ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್, ಕೋಟ ಗ್ರಾಪಂ ಅಧ್ಯಕ್ಷೆ ವನಿತಾ ಆಚಾರ್ಯ, ತಾಪಂ ಸದಸ್ಯೆ ಲಲಿತಾ, ಕೋಟತಟ್ಟು ಗ್ರಾಪಂ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಉದ್ಯಮಿ ಆನಂದ್ ಕುಂದರ್, ಜನಾರ್ದನ ಮರವಂತೆ, ಟಿ.ಬಿ.ಶೆಟ್ಟಿ ಉಪಸ್ಥಿತರಿದ್ದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ಸ್ವಾಗತಿಸಿದರು. ಕೋಟತಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.
ಚುನಾವಣೆಯಲ್ಲಿ ಸುಧಾರಣೆ ತನ್ನಿ
ಗ್ರಾಮ ಸ್ವರಾಜ್ಯ ಕಾಯಿದೆಗೆ ತಿದ್ದುಪಡಿ ವರದಿ ಯಲ್ಲಿ ಚುನಾವಣೆ ಬದ ಲಾವಣೆಗಳನ್ನು ಪ್ರಮುಖವಾಗಿ ಉಲ್ಲೇಖಿಸ ಲಾಗಿತ್ತು. ಆದರೆ ಇಂದಿಗೂ ಆಚರಣೆಗೆ ಬಂದಿಲ್ಲ. ಪ್ರಧಾನಿಗಳು ಚುನಾವಣೆ ಯಲ್ಲಿ ಸುಧಾರಣೆ ತರುವ ಕಾರ್ಯ ಮಾಡಬೇಕು. ರಾಜಕೀಯ ಪಕ್ಷಗಳಲ್ಲಿ ರುವ ಕಪ್ಪು ಹಣವನ್ನು ಹೊರಗೆ ತರಬೇಕು. ಯೋಗ್ಯ, ಬಡವ, ಸಮರ್ಥ ನಾಗಿರುವ ವ್ಯಕ್ತಿ ಮುಕ್ತ ವಾಗಿ ಚುನಾವಣೆಯಲ್ಲಿ ಆರಿಸಿ ಬರುವ ವಾತಾವರಣ ಸೃಷ್ಠಿ ಮಾಡಬೇಕು ಎಂದು ಸಚಿವ ರಮೇಶ್ ಕುಮಾರ್ ಒತ್ತಾಯಿಸಿದರು.