ಉಡುಪಿಯಲ್ಲಿ ಸಂಭ್ರಮದ ‘ಚೂರ್ಣೋತ್ಸವ’
ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ ಒಂದು ವಾರ ಗಳಿಂದ ನಡೆಯುತ್ತಿರುವ ಸಪ್ತೋತ್ಸವದ ಕೊನೆಯ ದಿನವಾದ ಇಂದು ಹಗಲಿನ ರಥೋತ್ಸವ ‘ಚೂರ್ಣೋತ್ಸವ’ದೊಂದಿಗೆ ಸಂಪನ್ನಗೊಂಡಿತು.
ಬ್ರಹ್ಮರಥದಲ್ಲಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣರ ಮೂರ್ತಿಯನ್ನು ಇಟ್ಟು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸಹಿತ ಎಲ್ಲ ಸ್ವಾಮೀಜಿಗಳು ಪೂಜೆ ಸಲ್ಲಿಸಿದರು. ತದನಂತರ ರಥಬೀದಿಯಲ್ಲಿ ನೆರೆದ ಭಕ್ತ ಸಮೂಹ ರಥವನ್ನು ಎಳೆದು ಒಂದು ಸುತ್ತು ಬರಲಾಯಿತು.
ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ, ಅದಮಾರು ಹಿರಿಯ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ರಥವನ್ನು ಎಳೆದು ಉತ್ಸವದಲ್ಲಿ ಪಾಲ್ಗೊಂಡರು.
ನಂತರ ಪಲ್ಲ ಪೂಜೆ, ಮಧ್ವಮಂಟಪದಲ್ಲಿ ವಾಲಗ ಮಂಟಪ ಪೂಜೆ, ಅಷ್ಟಾವಧಾನ ನೆರವೇರಿಸಿದ ಬಳಿಕ ಮಧ್ವ ಸರೋವರದಲ್ಲಿ ಎಲ್ಲ ಸ್ವಾಮೀಜಿ ಗಳು ಅವಭೃತ ಸ್ನಾನ ನಡೆಸಿದರು.