ಅಖಿಲಭಾರತ ಅಂತರ್ ವಿವಿ ಅಥ್ಲೆಟಿಕ್ಸ್: ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್

Update: 2017-01-15 13:01 GMT

ಕೊಣಾಜೆ,ಜ.15: ಚೆನೈನ ಕೊಯಮತ್ತೂರಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಡೆದ 77ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಮಂಗಳೂರು ವಿವಿಯು ಪುರುಷರ ವಿಭಾಗದಲ್ಲಿ 10 ಚಿನ್ನ, 5 ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು, ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿಯು 2 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಪಡೆಯುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಇದೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಅಖಿಲ ಭಾರತ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಪಶಸ್ತಿಯನ್ನು ಪಡೆದು ಹೊಸ ಇತಿಹಾಸವನ್ನು ಬರೆದಿದೆ.

 ಮಂಗಳೂರು ವಿವಿಯು ಒಟ್ಟು 178 ಪಾಯಿಂಟ್‌ಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಗಳಿಸಿಕೊಂಡರೆ, ಕೊಟ್ಟಾಯಂನ ಎಂಜಿ.ವಿವಿಯು 114 ಪಾಯಿಂಟ್ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪಟಿಯಾಲದ ಪಂಜಾಬ್ ವಿವಿಯು 112 ಪಾಯಿಂಟ್ ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.

ಪುರುಷರ ವಿಭಾಗದಲ್ಲಿ ಒಟ್ಟು 125 ಅಂಕಗಳನ್ನು ಪಡೆದ ಮಂಗಳೂರು ವಿವಿಯು ಪ್ರಥಮ ಸ್ಥಾನದಲ್ಲಿದ್ದರೆ, ಮಹಿಳಾ ವಿಭಾಗದಲ್ಲಿ ಕೊಟ್ಟಾಯಂನ ಎಂ.ಜಿ.ವಿವಿಯು 84 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದೆ. ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿಯು 53 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿದೆ.

 ಮಂಗಳೂರು ವಿವಿ ತಂಡದಲ್ಲಿ ಚಿನ್ನ ಪದಕವನ್ನು ಗಳಿಸಿಕೊಂಡವರು: 400 ಮೀಟರ್ ಹರ್ಡಲ್ಸ್ ನಲ್ಲಿ ಅನು, ಪುರುಷರ ವಿಭಾಗದಲ್ಲಿ ದಾರುಣ್, ಎತ್ತರ ಜಿಗಿತದಲ್ಲಿ ಶ್ರೀನಿತ್, ಹಾಫ್ ಮ್ಯಾರಥನ್‌ನಲ್ಲಿ ರಂಜಿತ್ ಕುಮಾರ್, ನಡೆಯುವ ಸ್ಫರ್ಧೆಯಲ್ಲಿ ಕುಲದೀಪ್, ಉದ್ದಜಿಗಿತದಲ್ಲಿ ಸಿರಾಜುದ್ದೀನ್, ಜಾವಲಿನ್ ಎಸೆತದಲ್ಲಿ ಅಶೀಶ್ ಸಿಂಗ್, ಡೆಕಾಥ್ಲಾನ್ ನಲ್ಲಿ ಜಾಗ್ತರ್ ಸಿಂಗ್, 800 ಮೀಟರ್ ಓಟದಲ್ಲಿ ಭರತ್, ಹಾಫ್ ಮ್ಯಾರಥಾನ್‌ನಲ್ಲಿ ಚೌವಾನ್ ಜ್ಯೋತಿ, ಸ್ಲೀಪ್ ಚೇಸ್‌ನಲ್ಲಿ ಹರಿಭಕ್ಷ್ ಸಿಂಗ್, 1500 ಮೀಟರ್‌ನಲ್ಲಿ ಮಂಜಿತ್ ಸಿಂಗ್

 ಬೆಳ್ಳಿ ಪದಕ ಗಳಿಸಿದವರು:ಉದ್ದ ಜಿಗಿತದಲ್ಲಿ ಸಿದ್ದಾರ್ಥ್ ಮೋಹನ್ , ಹಾಫ್ ಮ್ಯಾರಥಾನ್‌ನಲ್ಲಿ ಕಾಂತಿಲಾಲ್, 5000 ಮೀಟರ್‌ನಲ್ಲಿ ರಾಬಿನ್ ಸಿಂಗ್, ಮೀನು ಕುಮಾರಿ, ಎತ್ತರ ಜಿಗಿತದಲ್ಲಿ ಸೀನ, ಕಾರ್ತಿಕ್, 10,000 ಮೀಟರ್‌ನಲ್ಲಿ ರಂಜಿತ್. 1,500 ಮೀಟರ್‌ನಲ್ಲಿ ರಿಶು

ಕಂಚಿನ ಪದಕ ಗಳಿಸಿದವರು: 800 ಮೀಟರ್‌ನಲ್ಲಿ ಮಿಜು ಚ್ಯಾಕೋ, ಗುಂಡೆಸೆತದಲ್ಲಿ ಲಕ್ವಿಂದರ್ ಸಿಂಗ್, ಅಲ್ಫಿನ್.

ದಾರುಣ್, ಹರಿಭಕ್ಷ್ ಹೊಸ ದಾಖಲೆ

ಮಂಗಳೂರು ವಿವಿಯ ದಾರುಣ್ 400 ಮೀಟರ್ ಹರ್ಡಲ್ಸ್‌ನಲ್ಲಿ ತನ್ನದೇ ಹೆಸರಿನಲ್ಲಿದ್ದ 51.34 ಸೆಕೆಂಡುಗಳ ದಾಖಲೆಯನ್ನು ಮುರಿದು 50.81 ಸೆಕೆಂಡ್‌ನ ಹೊಸ ದಾಖಲೆಯನ್ನು ಬರೆದರು. ಪುರುಷರ ವಿಭಾಗದ 300 ಮೀಟರ್ ಸ್ವೀಪಲ್ ಚೇಸ್‌ನಲ್ಲಿ ಮಂಗಳೂರು ವಿವಿಯ ಹರಿಭಕ್ಷ್‌ರವರು ತನ್ನ ಹಳೆಯ ದಾಖಲೆ 9.18.37 ನಿಮಿಷ ಇದನ್ನು ಮುರಿದು 9.15.08 ಸಮಯದೊಂದಿಗೆ ಹೊಸ ದಾಖಲೆಯನ್ನು ಬರೆದಿದ್ದಾರೆ.

ಇತಿಹಾಸ ಬರೆದ ಮಂಗಳೂರು ವಿಶ್ವವಿದ್ಯಾನಿಲಯ

ಇದುವರೆಗೆ ನಡೆದ 77 ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎಂ.ಜಿ.ವಿಶ್ವವಿದ್ಯಾನಿಲಯ ಹೊರತು ದಕ್ಷಿಣ ಭಾರತದಲ್ಲಿ ಸುಮಾರು 20 ವರ್ಷಗಳ ನಂತರ ಮಂಗಳೂರು ವಿಶ್ವವಿದ್ಯಾನಿಲಯವು ಹೊಸ ದಾಖಲೆಯೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಇಷ್ಟರವರೆಗೆ ನಡೆದ ಅಖಿಲ ಭಾರತ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಂಜಾಬ್ ವಿವಿ ಪಟಿಯಾಲ, ಚಂಡೀಗಡ, ಗುರುನಾನಕ್ ವಿವಿ ಅಮೃತಸರ ಮತ್ತು ರೊಹ್ಟಕ್ ವಿವಿಯು ಚಾಂಪಿಯನ್ ಆಗಿ ಸಾಧನೆ ಮಾಡಿದ್ದವು. ಆದರೆ ಇದೀಗ ದಕ್ಷಿಣ ಭಾರತದಲ್ಲಿ ಮಂಗಳೂರು ವಿವಿ ಅಖಿಲ ಭಾರತ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ಹೊಸ ಇತಿಹಾಸವನ್ನು ಬರೆದಿದೆ.

ತಂಡದ ಕೋಚ್ ಆಗಿ ರಾಧಾಕೃಷ್ಣ ಎಂ.ಆರ್, ಸೇಸಪ್ಪ ಗೌಡ, ರಾಮಚಂದ್ರ ಪಾಟ್ಕರ್, ಮ್ಯಾನೇಜರ್ ಆಗಿ ಪ್ರವೀಣ್ ಕುಮಾರ್, ಜಯಭಾರತಿ, ತಿಲಕ್ ಶೆಟ್ಟಿ ಅವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News