ವಿಯೆಟ್ನಾಂ ಯುದ್ದದ ತನ್ನ ‘ಶತ್ರು’ವನ್ನು ಭೇಟಿಯಾದ ಜಾನ್ ಕೆರಿ
ಹನೋಯ್ (ವಿಯೆಟ್ನಾಂ), ಜ. 15: ಅಮೆರಿಕದ ನಿರ್ಗಮನ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ, ವಿಯೆಟ್ನಾಂ ಯುದ್ಧದ ವೇಳೆ ತನ್ನ ಮೇಲೆ ಹೊಂಚು ದಾಳಿ ನಡೆದ ಮೆಕಾಂಗ್ ಡೆಲ್ಟ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಮಾಜಿ ನೌಕಾಪಡೆ ಲೆಫ್ಟಿನೆಂಟ್ ಆಗಿರುವ ಕೆರಿ ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದರು.
1969ರಲ್ಲಿ ನಡೆದ ದಾಳಿಯನ್ನು ನೆನಪಿಟ್ಟುಕೊಂಡಿರುವ 70 ವರ್ಷದ ‘ವಿಯೆಟ್ ಕಾಂಗ್’ನ ಮಾಜಿ ಸೈನಿಕ ವೋ ಬನ್ ಟಾಮ್‌ರನ್ನು ಕೆರಿ ಭೇಟಿಯಾದರು. ಅಂದು ಕೆರಿ, ಟಾಮ್ ವಿರುದ್ಧವೇ ಹೋರಾಡಿದ್ದರು. ವಿಯಟ್ ಕಾಂಗ್ ವಿಯೆಟ್ನಾಂ ಸೇನೆಯ ಒಂದು ಘಟಕವಾಗಿದೆ.
ಅಧಿಕಾರದಿಂದ ಕೆಳಗಿಳಿಯುವ ಮುನ್ನ ತನ್ನ ಕೊನೆಯ ಪ್ರವಾಸದ ಭಾಗವಾಗಿ ಕೆರಿ ವಿಯೆಟ್ನಾಂನಲ್ಲಿದ್ದಾರೆ. ವಿಯೆಟ್ನಾಂ ಯುದ್ಧದಲ್ಲಿ ತೋರಿಸಿದ ಶೌರ್ಯಕ್ಕಾಗಿ ಕೆರಿ ಶೌರ್ಯ ಪದಕವನ್ನು ಪಡೆದಿದ್ದಾರೆ. ಆದರೆ ವಿಯೆಟ್ನಾಂ ಯುದ್ಧ ಮುಗಿದು ಮರಳಿದ ಬಳಿಕ ಅವರು ಯುದ್ಧ ವಿರೋಧಿ ಹೋರಾಟಗಾರನಾಗಿ ಮಾರ್ಪಟ್ಟರು.
ತಾವಿಬ್ಬರೂ ಬದುಕಿರುವುದಕ್ಕಾಗಿ ತನಗೆ ಸಂತೋಷವಾಗುತ್ತಿದೆ ಎಂಬುದಾಗಿ ಕೆರಿ ತನ್ನ ಹಾಲಿ ವಿಯೆಟ್ನಾಂ ಗೆಳೆಯ ಹಾಗೂ ಮಾಜಿ ಶತ್ರು ಟಾಮ್‌ಗೆ ಹೇಳಿದರು.
ಕೆರಿ ಗುಂಡು ಹಾರಿಸಿ ಕೊಂದ ವ್ಯಕ್ತಿಯೊಬ್ಬ ತನಗೆ ಗೊತ್ತು ಎಂದು ಈಗ ಸಿಗಡಿ ಕೃಷಿಕನಾಗಿರುವ ಟಾಮ್ ಹೇಳಿದರು. ಅಮೆರಿಕದ ಗಸ್ತು ದೋಣಿಯನ್ನು ಕಂಡಾಗ ದಾಳಿ ನಡೆಸಲು ತಾವು ರೂಪಿಸಿದ ಯೋಜನೆಯನ್ನು ಅವರು ನೆನಪಿಸಿಕೊಂಡರು.
ವಿಯಟ್ ಕಾಂಗ್ ಘಟಕವು ಒಂದು ರಾಕೆಟ್ ಲಾಂಚರನ್ನು ಹೊಂದಿತ್ತು. ಅಮೆರಿಕದ ಸೈನಿಕರನ್ನು ತಾವಿರುವಲ್ಲಿಗೆ ಆಕರ್ಷಿಸುವುದಕ್ಕಾಗಿ ಅದು ಗುಂಡು ಹಾರಿಸುತ್ತಿತ್ತು.
ಆದರೆ, ಕೆರಿ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡು ತನ್ನ ಮೇಲೆ ದಾಳಿ ನಡೆಸುವವರನ್ನು ಬೆನ್ನಟ್ಟುವುದಕ್ಕಾಗಿ ಸಮುದ್ರಕ್ಕೆ ಹಾರಿ ದಡದತ್ತ ಈಜಿಕೊಂಡು ಹೋದರು ಹಾಗೂ ಈ ಸಂದರ್ಭದಲ್ಲಿ ರಾಕೆಟ್ ಲಾಂಚರ್‌ನ ನಿರ್ವಾಹಕನನ್ನು ಗುಂಡು ಹಾರಿಸಿ ಕೊಂದರು.
ಅವರು ತನ್ನ ಈ ಕ್ರಮದ ಮೂಲಕ ತನ್ನ ಹಡಗಿನ ಸಿಬ್ಬಂದಿಯ ಪ್ರಾಣ ಉಳಿಸಿದರು. ಇದಕ್ಕಾಗಿ ಅವರಿಗೆ ಅಮೆರಿಕ ಸೇನೆಯು ಶೌರ್ಯಕ್ಕಾಗಿ ನೀಡುವ ‘ಸಿಲ್ವರ್ ಸ್ಟಾರ್’ ಪ್ರಶಸ್ತಿಯನ್ನು ನೀಡಿತು.