ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಗ್ರ್ಯಾಂಡ್ ಕ್ವೆಸ್ಟ್ 2017’
ಕೊಣಾಜೆ,ಜ.15: ಇಂದಿನ ಸ್ಫರ್ದಾತ್ಮಕ ಜಗತ್ತಿನಲ್ಲಿ ನಾವು ಮುನ್ನಡೆಯಬೇಕಾದರೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ನೂತನ ಆವಿಷ್ಕಾರಗಳೊಂದಿಗೆ ಸಾಧನೆ ಮಾಡಿ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರ ಪಾತ್ರ ಮಹತ್ತರವಾದುದು ಎಂದು ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸೈಯದ್ ಮುಹಮ್ಮದ್ ಬ್ಯಾರಿ ಅವರು ಅಭಿಪ್ರಾಯ ಪಟ್ಟರು.
ಇನೋಳಿಯ ಬ್ಯಾರೀಸ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ದಕ್ಷಿಣ ಕರ್ನಾಟಕದ ವಿವಿಧ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆದ ‘ಗ್ರ್ಯಾಂಡ್ ಕ್ವೆಸ್ಟ್-2017’ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಶಿಕ್ಷಣ ಎಂಬುದು ಇಂದು ಪ್ರತಿಯೊಬ್ಬರಿಗೂ ಅವಶ್ಯಕವಾಗಿದ್ದು, ಶಿಕ್ಷಣದ ಜೊತೆಗೆ ನಮ್ಮ ಜ್ಞಾನ ಕೌಶಲ್ಯದೊಂದಿಗೆ ಉತ್ತಮ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಅರಿವನ್ನು ಬೆಳೆಸಿಕೊಂಡು ದೇಶಕ್ಕೆ ನಮ್ಮ ಸೇವೆಯನ್ನು ಸಲ್ಲಿಸುವಂತಾಗಬೇಕು. ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಮ್ಮಲ್ಲಿರುವ ಜ್ಞಾನ ಶಕ್ತಿಯನ್ನು ಇನ್ನಷ್ಟು ವೃದ್ಧಿಗೊಳಿಸಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಿಗ್ಮಾ ಪೌಂಡೇಶನ್‌ನ ಅಧ್ಯಕ್ಷರಾದ ಅಮೀನ್ ಮುದಸ್ಸರ್ ಅವರು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವಿಸ್ಕೃತವಾದ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಅಲ್ಲದೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳಿದ್ದು ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲೇ ನಾವು ಉತ್ತಮ ಅಡಿಪಾಯವನ್ನು ಹಾಕಬೇಕು ಎಂದು ಹೇಳಿದರು.
ಬಿಐಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಅಜಿತ್ ಮುಸ್ತಫಾ, ಕಾರ್ಯಕ್ರಮ ಸಂಯೋಜಕ ಪ್ರೊ.ಝಮೀಲ್ ಅಹ್ಮದ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾರಿಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಕಾರ್ಯಕ್ರಮದ ವರದಿಯೊಂದಿಗೆ ವಂದಿಸಿದರು.
ಗ್ರ್ಯಾಂಡ್ ಕ್ವೆಸ್ಟ್ ಸ್ಪರ್ಧೆಯಲ್ಲಿ ದ.ಕ, ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಪಿಯು ಕಾಲೇಜುಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೂರು ವಿಭಾಗಗಳಲಿ ನಡೆದ ಸ್ಪರ್ಧೆಯಲ್ಲಿ ಕ್ವಿಜ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಪ್ರಥಮ ಸ್ಥಾನವನ್ನು ಪಡೆದರೆ, ಪ್ರಬಂಧ ಸ್ಪರ್ಧೆಯಲ್ಲಿ ಹಿರಾ ಮಹಿಳಾ ಕಾಲೇಜು ಮತ್ತು ಕಣಚೂರು ಪಿಯು ಕಾಲೇಜು ಪ್ರಶಸ್ತಿಯನ್ನು ಹಂಚಿಕೊಂಡಿತು.
ಪ್ರಾಜೆಕ್ಟ್ ಮತ್ತು ಮಾಡೆಲ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ಮತ್ತು ಕೋಡಿ ಕುಂದಾಪುರ ಬ್ಯಾರೀಸ್ ಪಿಯು ಕಾಲೇಜು ಪ್ರಥಮ ಸ್ಥಾನವನ್ನು ಪಡೆಯಿತು.