ಶಿಕ್ಷಣ, ಉದ್ಯೋಗ ನೀತಿ ಬದಲಾದರೆ ಕನ್ನಡ ಉಳಿವು: ಮುಖ್ಯಮಂತ್ರಿ ಚಂದ್ರು
ಬ್ರಹ್ಮಾವರ, ಜ.15: ಶಿಕ್ಷಣ ನೀತಿ, ಉದ್ಯೋಗದ ನೀತಿ ಬದಲಾಗಿ, ಆಂಗ್ಲ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿತಲ್ಲಿ ಮಾತ್ರ ಕನ್ನಡ ಭಾಷಿಗರಿಗೆ ಉಳಿವಿದೆ ಎಂದು ಚಿತ್ರನಟ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ, ಸುಜ್ಞಾನ ಮಣೂರು ಕೋಟ ಮತ್ತು ಬ್ರಹ್ಮಾವರ ಅಜಪುರ ಕರ್ನಾಟಕ ಸಂಘದ ಸಹಯೋಗದಲ್ಲಿ ರವಿವಾರ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲಲಿ ಅವರು ಮಾತನಾಡುತಿದ್ದರು. ಗಡಿಭಾಗ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಇಂದು ಮಾತೃ ಭಾಷೆಯ ಕುರಿತು ಗೊಂದಲ ಸೃಷ್ಟಿಯಾಗಿದೆ. ವಿಭಿನ್ನತೆಯಲ್ಲಿ ಏಕತೆಯಿರುವ ಭಾರತದಲ್ಲಿ ಸಾವಿರಾರು ಭಾಷೆಗಳಿವೆ. ವ್ಯಾಪಾರೀಕರಣದ ಮನೋ ಭಾವನೆಯ ಕಾರಣ ಇಂದು ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ ಎಂದರು.
ಅಂಗನವಾಡಿ ಕೇವಲ ಬಡವರಿಗೆ ಸೀಮಿತವಾಗಿದ್ದು, ಕಾನ್ವೆಂಟ್ ಶ್ರೀಮಂತ ರಿಗೆ ಎಂಬ ಭಾವನೆ ನಮ್ಮಲ್ಲಿದೆ. ಸರಕಾರಿ ವಲಯದಲ್ಲಿ ಕನ್ನಡ ಭಾಷಿಕರಿಗೆ ಉದ್ಯೋಗದಲ್ಲಿ ಅವಕಾಶ ಇದ್ದರೆ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗಿವೆ ಎಂದು ಅವರು ಅಸಮಾ ಧಾನ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ಡಾ.ಪಾದೇಕಲ್ಲು ವಿಷ್ಣುಭಟ್ ಸಮಾರೋಪ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಪ್ರೊ.ಎಂ.ರಾಮ ಚಂದ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬ್ರಹ್ಮಾವರದ ಎನ್.ಎಸ್.ಅಡಿಗ, ಕೋಟೇಶ್ವರ ಮೊಯ್ದಿನ್ ಸಾಹೇಬ್, ಬ್ರಹ್ಮಾವರದ ರಾಮಕೃಷ್ಣ ಆಚಾರ್, ಮಟ್ಟಿ ಲಕ್ಷೀನಾರಾಯಣ ರಾವ್, ಕುಂದಾಪುರದ ವಿ.ಗಣೇಶ್ ಕೊರಗ, ಸಾದು ಪಾಣ, ಕಾರ್ಕಳದ ಯಶವಂತಿ ಎಸ್. ಸುವರ್ಣ, ನಾಟಿ ವೈದ್ಯ ಮಹಾಬಲ ನಾಯ್ಕ, ಬಾರ್ಕೂರಿನ ಫಾ.ವಲೇರಿ ಯನ್ ಮೆಂಡೋನ್ಸಾ, ಉಮೇಶ್ ಗೌತಮ ನಾಯಕ್, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ಬಾರ್ಕೂರಿನ ಕರಿಷ್ಮಾ ಅವರನ್ನು ಗೌರವಿಸಲಾಯಿತು. ವಿಶ್ವ ಭಾರತಿ ಪ್ರತಿಷ್ಟಾನದ ದತ್ತಿ ನಿಧಿ ಅರ್ಪಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಮೇಟಿ ಮುದಿಯಪ್ಪ, ಸರೋಜ ಪುಂಡಲೀಕ ಹಾಲಂಬಿ, ಮೋಹನ್ ಉಡುಪ ಹಂದಾಡಿ, ರಂಗಪ್ಪಯ್ಯ ಹೊಳ್ಳ, ಅಶೋಕ್ ಭಟ್, ಸೂರಾಲು ನಾರಾಯಣ ಮಡಿ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿದರು. ಡಾ.ರವೀಂದ್ರ ನಾಥ ರಾವ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನದ ನಿರ್ಣಯ
ಸರಕಾರ ಈಗಾಗಲೇ ಘೋಷಣೆ ಮಾಡಿರುವ ಬ್ರಹ್ಮಾವರ ಮತ್ತು ಬೈಂದೂರನ್ನು ತಾಲ್ಲೂಕು ಕೇಂದ್ರವನ್ನು ಕೂಡಲೇ ಅನುಷ್ಟಾನಗೊಳಿಸಬೇಕು ಮತ್ತು ಕರ್ನಾಟಕದಲ್ಲಿ ಉದ್ಯೋಗಕ್ಕಾಗಿ ನಡೆಯುವ ಸಂದರ್ಶನಗಳು ಕನ್ನಡದಲ್ಲಿಯೇ ನಡೆಯಬೇಕು ಎಂಬ ನಿರ್ಣಯವನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತೆಗೆದುಕೊಳ್ಳಲಾಯಿತು.