‘ಕುರ್‌ಆನ್’ ಸಂದೇಶ ಸಾರ್ವಕಾಲಿಕ: ಝೈದ್ ಪಟೇಲ್
ಮಂಗಳೂರು, ಜ.15: ‘ಕುರ್‌ಆನ್’ ವಿಶ್ವಕ್ಕೆ ಉದಾತ್ತ ಮತ್ತು ಸಾರ್ವಕಾಲಿಕ ಸಂದೇಶವನ್ನು ನೀಡಿರುವ ಪವಿತ್ರ ಗ್ರಂಥವಾಗಿದೆ ಎಂದು ಐ ಪ್ಲಸ್ ಟಿವಿಯ ನಿರ್ದೇಶಕ ಝೈದ್ ಪಟೇಲ್ ತಿಳಿಸಿದ್ದಾರೆ.
ಅವರು ಕರ್ನಾಟಕ ಸಲಫಿ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ‘ದಿ ಮಿರಾಕಲ್ ಎಕ್ಸಿಬೂಷನ್ ಆನ್ ಇಸ್ಲಾಂ’ನ ಸಮಾರೋಪ ಸಮಾರಂಭದಲ್ಲಿ ‘ಕುರ್‌ಆನ್‌ನ ನೈಜ ಸಂದೇಶ’ದ ಕುರಿತು ಪ್ರವಚನ ನೀಡಿದರು.
ಪ್ರವಾದಿ ಮುಹಮ್ಮದ್ (ಸ) ಅವರ ಕಾಲದಲ್ಲಿ ಯಾವುದೇ ವಿಜ್ಞಾನವಾಗಲಿ, ತಂತ್ರಜ್ಞಾನವಾಗಲಿ ಇರಲಿಲ್ಲ. ಸೃಷ್ಟಿಕರ್ತನಿಂದ ವ್ಯವಸ್ಥಿತ ಹಾಗೂ ಯೋಜನಾಬದ್ಧವಾಗಿ ಸೃಷ್ಟಿಸಲ್ಪಟ್ಟ ಸಮಸ್ತ ಭೂಮಂಡಲ, ಖಗೋಳ ಹಾಗೂ ಸಮಸ್ತ ಜೀವಸಂಕುಲದ ಬಗ್ಗೆ ಇಂದಿನ ವೈಜ್ಞಾನಿಕ ಯುಗಕ್ಕೂ ಪ್ರಸ್ತುತವಾಗುವ ಸಂದೇಶವನ್ನು ನೀಡಿದೆ ಎಂದರು.
ಇಸ್ಲಾಂ ಶಾಂತಿಯ ಧರ್ಮ: ಹುಸೈನ್ ಸಲಫಿ
ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಪ್ರೇರೇಪಿಸುವುದಿಲ್ಲ. ಅದು ಶಾಂತಿ ಮತ್ತು ಸಹೋದರತೆಯನ್ನು ಬೋಧಿಸುತ್ತದೆ ಎಂದು ಕೇರಳದ ವಿಸ್ಡಂ ಗ್ಲೋಬಲ್ ಇಸ್ಲಾಮಿಕ್ ಮಿಷನ್‌ನ ಪ್ರಮುಖ ಹಾಗೂ ಶಾರ್ಜಾ ಇಂಡಿಯನ್ ಇಸ್ಲಾಹಿ ಸೆಂಟರ್‌ನ ಅಧ್ಯಕ್ಷ ಹುಸೈನ್ ಸಲಫಿ ಹೇಳಿದ್ದಾರೆ.
‘ಓರ್ವ ಅಮಾಯಕನ ಹತ್ಯೆಯು ಇಡೀ ಮಾನವ ಕುಲದ ಹತ್ಯೆಗೆ ಸಮಾನವಾಗಿದೆ’ ಎಂದು ಪವಿತ್ರ ಕುರ್‌ಆನ್ ಹೇಳಿರುವಾಗ ಓರ್ವ ಮುಸ್ಲಿಮನಾದವನು ಇನ್ನೋರ್ವನ ಹತ್ಯೆ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಭ್ರೂಣ ಹತ್ಯೆ, ಮದ್ಯಪಾನ, ಅಮಲು ಪದಾರ್ಥ ಸೇವನೆ, ವ್ಯಭಿಚಾರ, ಬಡ್ಡಿ ಮೊದಲಾದ ಅನಾಚಾರಗಳು ಜನರನ್ನು ಶೋಷಣೆಗೊಳಪಡಿಸುತ್ತಿದೆ. ಆದ್ದರಿಂದ ಇಸ್ಲಾಂ ಇವುಗಳನ್ನು ನಿಷೇಧಿಸಿದ್ದು, ಇಂತಹ ಧರ್ಮಬಾಹಿರ ಕೃತ್ಯಗಳಿಂದ ದೂರವಿರುವಂತೆ ಅವರು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು.
ನೌಫಲ್ ಮದನಿ, ಯು.ಎಂ.ಮೊದಿನ್ ಕುಂಞಿ, ಕರ್ನಾಟಕ ಸಲಫಿ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್, ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಉಳ್ಳಾಲ, ಕಾರ್ಯದರ್ಶಿ ನಝೀರ್ ಸಲಫಿ, ವಿದೇಶ ಪ್ರತಿನಿಧಿ ಹೈದರ್ ಉಳ್ಳಾಲ, ಉದ್ಯಮಿ ಸಯ್ಯದ್ ಕರ್ನಿರೆ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಸಚಿವರಾದ ಯು.ಟಿ.ಖಾದರ್, ರಮಾನಾಥ ರೈ, ಐವನ್ ಡಿಸೋಜಾ, ಕಾರ್ಪೊರೇಟರ್ ಸುಧೀರ್ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದರು.
ನೆಹರೂ ಮೈದಾನಕ್ಕೆ ಹರಿದು ಬಂದ ಜನಸಾಗರ
ಕರ್ನಾಟಕ ಸಲಫಿ ಅಸೋಸಿಯೇಷನ್ ವತಿಯಿಂದ ಜನವರಿ 9 ರಿಂದ 15 ರ ವರೆಗೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿರುವ ‘ದಿ ಮಿರಾಕಲ್ ಎಕ್ಸಿಬೂಷನ್ ಆನ್ ಇಸ್ಲಾಂ’ ವಸ್ತುಪ್ರದರ್ಶನ ಸಮಾರೋಪಕ್ಕೆ ಜನಸಾಗರ ಹರಿದು ಬಂದಿತ್ತು.
ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ವ್ಯವಸ್ಥಿತವಾಗಿ ಇರಿಸಲಾಗಿದ್ದ ಕುರ್ಚಿಗಳ ಕೊರತೆ ಕಂಡು ಬಂದವು. ಇದರಿಂದಾಗಿ ಬಂದವರಿಗೆ ನೆಲದಲ್ಲಿ ಕಾರ್ಪೆಟ್‌ಗಳನ್ನು ಹಾಸಿ ವ್ಯವಸ್ಥೆ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿದ್ದ ಸ್ವಯಂ ಸೇವಕರು ಬಂದವರನ್ನು ಸ್ವಾಗತಿಸುತ್ತಾ ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದ ದೃಶ್ಯ ಕಂಡುಬಂದವು. ಈ ನಡುವೆ ವೇದಿಕೆಯಿಂದ ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ಹಿರಿಯರಿಗೆ ಮೊದಲು ಆಸನದ ವ್ಯವೆಸ್ಥ ಕಲ್ಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಮಹಿಳೆಯರಿಗೂ ಪ್ರತೇಕ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದ್ದರು.
ಪ್ರತೀದಿನ ಬೆಳಗ್ಗೆ 9ರಿಂದ ರಾತ್ರಿ 10 ರ ವರೆಗೆ ವಸ್ತುಪ್ರದರ್ಶನವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರತಿದಿನ ಸಂಜೆ 4.30 ರಿಂದ ರಾತ್ರಿ 10 ಗಂಟೆಯ ವರೆಗೆ ನಡೆದ ಸಭಾಕಾರ್ಯಕ್ರಮಗಳಲ್ಲಿ ಖ್ಯಾತ ವಿದ್ವಾಂಸರು ವಿವಿಧ ವಿಷಯಗಳ ಕುರಿತು ಉಪದೇಶ ನೀಡಿದರು.
ಹವಾನಿಯಂತ್ರಿತ ಪೆಲಿಯನ್ ಒಳಗೆ ಸಿದ್ಧಪಡಿಸಿ ಇಡಲಾದ ವಿವಿಧ ಪ್ಯಾನಲ್‌ಗಳು ವಿವಿಧ ವಿಷಯಗಳ ಬಗ್ಗೆ ಗಮನ ಸೆಳೆದವು. ಅದರಲ್ಲೂ ಸೃಷ್ಟಿಕರ್ತನ ಸೃಷ್ಟಿಯ ಕಡೆಗೆ ಜನರ ಗಮನ ಸೆಳೆದಿರುವುದು ವಿಶೇಷವಾಗಿತ್ತು.