×
Ad

ವಿಟ್ಲ: ಕಾರು ಅಪಘಾತ-ಮಗು ಸೇರಿ ಇಬ್ಬರು ಸ್ಥಳದಲ್ಲೇ ಮೃತ್ಯು

Update: 2017-01-16 14:40 IST

ಬಂಟ್ವಾಳ, ಜ. 16: ಎದುರಿನಿಂದ ಬರುತ್ತಿದ್ದ ವಾಹನವೊಂದು ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣತ ತಪ್ಪಿದ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ತಿಂಗಳ ಹುಸುಳೆ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಆರು ಮಂದಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡದ ಫಾರೆಸ್ಟ್ ಗೇಟ್ ಬಳಿ ಸೋಮವಾರ ಮಧ್ಯಾಹ ಸಂಭವಿಸಿದೆ.

ಕಡಂಬು ಸಮೀಪದ ಬದಿಯಾರು ನಿವಾಸಿ ಸುಲೈಮಾನ್ ಹಾಜಿ(60) ಮತ್ತು ಅವರ ಮೊಮ್ಮಗು ಸಝಾನ್(ನಾಲ್ಕು ತಿಂಗಳು) ಅಪಘಾತದಿಂದ ಮೃತಪಟ್ಟವರು.ಗಾಯಾಳುಗಳನ್ನು ಪುತ್ತೂರು ಹಾಗೂ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳಾದ ಮೃತ ಸುಲೈಮಾನ್ ಹಾಜಿರವರ ಪತ್ನಿ ಸಲ್ಮ(50), ಮಗಳು ನಸೀರ(22), ಮೈದುನ ಮುಹಮ್ಮದ್(32), ಅವರ ಪತ್ನಿ ಝಹಾರ(28) ಪುತ್ರ ನಿಹಾ(6), ಪುತ್ರಿ ನೈಫಾ(ಮೂರು ತಿಂಗಳು)ರವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುಣಚದ ಪರಿಯಲ್ತಡ್ಕದಲ್ಲಿರುವ ಸುಲೈಮಾನ್‌ರವರ ಎರಡನೆ ಪುತ್ರಿಯ ಮಗುವಿನ ಹುಟ್ಟು ಹಬ್ಬದ ಪಾರ್ಟಿಗೆಂದು ಸುಲೈಮಾನ್ ಕುಟುಂಬ ಇಂದು ಮಧ್ಯಾಹ್ನ ಮಾರುತಿ ಆಲ್ಟೋ ಕಾರಿನಲ್ಲಿ ಕಡಂಬುವಿನಿಂದ ವಿಟ್ಲ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಉಕ್ಕುಡದ ಫಾರೆಸ್ಟ್ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.

ಎದುರಿನಿಂದ ಬರುತ್ತಿದ್ದ ವಾಹನವೊಂದು ಸುಲೈಮಾನ್ ಹಾಜಿ ಕುಟುಂಬ ತೆರಳುತ್ತಿದ್ದ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿ ಹೊಡೆದಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಗಾಯಾಳು ಮುಹಮ್ಮದ್ ಕಾರು ಚಲಾಯಿಸುತ್ತಿದ್ದರು. ಮೃತ ಹಸುಳೆ ಸಝಾನ್ ಗಾಯಾಳು ನಸೀರರ ಮಗುವಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸುಲೈಮಾನ್ ಹಾಜಿರವರು ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಅಪಘಾತದಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಜನರು ಜಮಾಯಿಸತೊಡಗಿದ್ದು ಕಾರಿನಲ್ಲಿದ್ದ ಹುಟ್ಟು ಹಬ್ಬಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಗಿಫ್ಟ್ ನೋಡಿ ಎಲ್ಲರು ದುಖ ವ್ಯಕ್ತಪಡಿಸುತ್ತಿದ್ದರು.

ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News