×
Ad

ಮೈಮೇಲೆ ಬಿದ್ದ ವಿದ್ಯುತ್ ತಂತಿ : ಯುವಕ ಗಂಭೀರ

Update: 2017-01-16 15:29 IST

ಬಂಟ್ವಾಳ, ಜ.16: ವಿದ್ಯುತ್ ತಂತಿ ಮೈಮೇಲೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ನಡೆದಿದೆ.

ಇಲ್ಲಿನ ನಿವಾಸಿ ಕೃಷಿಕ ಸಂಜೀವ ಮಡಿವಾಳ ಎಂಬವರ ಪುತ್ರ ತಿಲಕ್ ಯಾನೆ ಯುವರಾಜ್(25) ಘಟನೆಯಿಂದ ಗಾಯಗೊಂಡವರು.

ಇಂದು ಬೆಳಗ್ಗೆ ಯುವರಾಜ್ ಮನೆಯಂಗಳದಲ್ಲಿದ್ದಾಗ ಅವರ ಮೈಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಯುವರಾಜ್‌ನ ಭುಜದ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಅಸ್ವಸ್ಥಗೊಂಡು ಅಂಗಲದಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಮನೆಯವರು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ತಂತಿ ಬಿದ್ದ ಬಗ್ಗೆ ಸ್ಥಳೀಯರು ಬಂಟ್ವಾಳ ಮೆಸ್ಕಾಂಗೆ ಮಾಹಿತಿ ನೀಡಿದ್ದು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತೆರವುಗೊಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಲಕ್ಷ್ಯದ ಆರೋಪ: ಈ ಭಾಗದ ಬಹುತೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ತೋಟದ ಮೂಲಕ ಹಾದು ಹೋಗಿದ್ದು ತೋಟದಲ್ಲಿ ಅಡಿಕೆ ಮರಗಳಿಗೆ ಸಿಂಪಡಿಸುವ ಕೋಪರ್ ಸಲ್ಫೈಟ್‌ನಿಂದ ವಿದ್ಯುತ್ ತಂತಿಗಳು ಬೇಗ ತುಕ್ಕು ಹಿಡಿದು ತುಂಡಾಗಿ ಬೀಳುತ್ತಿದೆ. ತೋಟದಲ್ಲಿ ಹಾದು ಹೋಗಿರುವ ಎಲ್ಲ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ರಸ್ತೆ ಬದಿಯಲ್ಲಿರುವ ಕಂಬಗಳಿಗೆ ಅಳವಡಿಸುವಂತೆ ಹಲವಾರು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ತಂತಿ ವರ್ಗಾವಣೆಗೆ ಅನುದಾನವಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ 35 ವರ್ಷಕ್ಕೂ ಅಧಿಕ ವರ್ಷ ಹಳೆಯದ್ದಾಗಿದ್ದರಿಂದ ಸಂಪೂರ್ಣವಾಗಿ ತುಕ್ಕು ಹಿಡಿದಿತ್ತು. ತೋಟದ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸದಿದ್ದರೆ ಇನ್ನಷ್ಟು ಅವಘಡಗಳು ಸಂಭವಿಸುವ ಅಪಾಯವಿದ್ದು, ಮೆಸ್ಕಾಂ ಅಧಿಕಾರಿಗಳು ಇನ್ನಾದರು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News