ಸುಳ್ಯ: ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕರವರ ವ್ಯಂಗ್ಯ ಚಿತ್ರ ಪ್ರದರ್ಶನ
ಸುಳ್ಯ, ಜ.16: ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆ ವತಿಯಿಂದ ಖ್ಯಾತ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕದವರ ಆಯ್ದ ವ್ಯಂಗ್ಯ ಚಿತ್ರ ಪ್ರದರ್ಶನವು ಸುಜನಾ ರಂಗ ಕುಠೀರದಲ್ಲಿ ಆರಂಭಗೊಂಡಿದೆ.
ಹಿರಿಯ ರಂಗಕರ್ಮಿ ಪ್ರಸಾದ್ ರಕ್ಷಿದಿ ಪ್ರದರ್ಶನವನ್ನು ಉದ್ಘಾಟಿಸಿದರು. ದಿನೇಶ್ ಕುಕ್ಕುಜಡ್ಕರವರು ತನ್ನ ಬಹು ವಿಶಿಷ್ಟವಾದ ಶಬ್ದ ಗೆರೆ ಸಂಯೋಜನೆಯ ಆಳ ಚಿಂತನೆಗಳ ಹರಹುಳ್ಳ ರೇಖಾ ಕ್ರಮದಿಂದ ಛಾಪು ಮೂಡಿಸಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ಚಿತ್ರ ಕಲಾವಿದ ಮೋಹನ ಸೋನಾ ಮಾತನಾಡಿ, ಸೂಕ್ಷ್ಮ ವಿಚಾರಗಳನ್ನು ಕಲೆಯ ಮೂಲಕ ಕಟ್ಟಿಕೊಡುವ ದಿನೇಶರು ಸುಳ್ಯದ ಸಾಂಸ್ಕೃತಿಕ ಶಕ್ತಿ ಎಂದರು. ಎಂ. ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ ಅತಿಥಿಗಳಾಗಿ ಮಾತನಾಡಿದರು. ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ ಮಾತನಾಡಿ, ವ್ಯಂಗ್ಯಚಿತ್ರಕಾರರು ನಾನಾ ಕಾರಣಗಳಿಗಾಗಿ ಅಳಿವಿನಂಚಿನಲ್ಲಿರುವ ಕಲಾಕಾರರು ಎನ್ನುತ್ತಾ ತನ್ನ ಅನುಭವಗಳನ್ನು ಬಿಚ್ಚಿಟ್ಟರು. ರಂಗಮನೆ ನಿರ್ದೇಶಕ ಜೀವನ್‌ರಾಂ ಸುಳ್ಯ ಉಪಸ್ಥಿತರಿದ್ದರು. ಡಾ.ಸುಂದರ ಕೇನಾಜೆ ವಂದಿಸಿದರು.
ರಂಗಮನೆ ವತಿಯಿಂದ ನಡೆಯುತ್ತಿರುವ ಈ ವ್ಯಂಗ್ಯ ಚಿತ್ರ ಪ್ರದರ್ಶನ ಜನವರಿ 15 ರಿಂದ ಫೆಬ್ರವರಿ 5ರತನಕ ಪ್ರತಿದಿನ 9ರಿಂದ ಸಂಜೆ 6 ತನಕ ಪ್ರದರ್ಶನಕ್ಕೆ ಲಭ್ಯವಿದೆ.