×
Ad

ಮೂಲಭೂತ ಸೌಲಭ್ಯಗಳು ಉತ್ತಮವಾಗಿದ್ದಾಗ ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯವನ್ನು ಉತ್ತಮಪಡಿಸಲು ಸಾಧ್ಯ : ರಮಾನಾಥ ರೈ

Update: 2017-01-16 16:32 IST

ಬಂಟ್ವಾಳ, ಜ. 16: ಮೂಲಭೂತ ಸೌಲಭ್ಯಗಳು ಉತ್ತಮವಾಗಿದ್ದಾಗ ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯವನ್ನು ಉತ್ತಮಪಡಿಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಆರ್‌ಎಂಎಸ್‌ಎ ಯೋಜನೆಯಡಿ ಬಿ. ಮೂಡ ಗ್ರಾಮದ ಕೊಡಂಗೆಯ ನೇತಾಜಿ ಸುಭಾಶ್ಚಂದ್ರ ಭೋಸ್ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಮೂರು ಅಂತಸ್ಥಿನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಕಟ್ಟಡ ಉದ್ಘಾಟನೆಯೆನ್ನುವುದು ಊರಿನವರ ಕಾರ್ಯಕ್ರಮವಾಗಬೇಕು. ಪೋಷಕರು ಕೂಡ ಶಾಲೆಯ ಬೆಳವಣಿಗೆಯಲ್ಲಿ ಪ್ರತ್ಯಕ್ಷ ಪಾತ್ರದಾರಿಗಳಾಗಬೇಕು. ತಮ್ಮ ಮಕ್ಕಳು ಓದುವ ಶಾಲೆ ಉತ್ತಮವಾಗಿರಬೇಕು ಎನ್ನುವ ಅಪೇಕ್ಷೆ ಪೋಷಕರಲ್ಲಿರಬೇಕು ಎಂದರು.

ಕೊಡಂಗೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಗರೋತ್ಥನ ಯೋಜನೆಯಡಿ ಸಂಪೂರ್ಣ ಡಾಮಾರೀಕರಣಗೊಳಿಸಲಾಗುವುದು. ಮಂಗಳವಾರ ಬೆಳಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸುವುದಾಗಿ ಅವರು ತಿಳಿಸಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾದ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಮಮತಾಗಟ್ಟಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮುಹಮ್ಮದ್, ಪುರಸಭಾ ಸದಸ್ಯರಾದ ಮುಹಮ್ಮದ್ ಶರೀಫ್, ವಸಂತಿ ಚಂದಪ್ಪ, ಯಾಸ್ಮೀನ್, ಪ್ರಭಾ ಆರ್.ಸಾಲ್ಯಾನ್, ಗಂಗಾಧರ, ಬೂಡ ನಿಕಟಪೂರ್ವಾಧ್ಯಕ್ಷ ಪಿಯೂಸ್ ರೊಡ್ರಿಗಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪದ್ಮನಾಭ ರೈ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

 ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡ ನಿರ್ಮಾಣದಲ್ಲಿ ಮುತುವರ್ಜಿ ವಹಿಸಿದ್ದ ಪುರಸಭೆ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಹಾಗೂ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ ರಾವ್ ಸ್ವಾಗತಿಸಿದರು, ಶಾಲಾಭಿವೃದ್ಧಿ ಸಮಿತಿ ಸದಸ್ಯ ಬಶೀರ್ ವಿಟ್ಲ ವಂದಿಸಿದರು. ಶಿಕ್ಷಕ ಸುನೀಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News