ಸಜಿಪ ನಾಸೀರ್ ಕೊಲೆ ಆರೋಪಿಗಳ ಜಾಮೀನು ರದ್ದು ಸ್ವಾಗತಾರ್ಹ: ಪಾಪ್ಯುಲರ್ ಫ್ರಂಟ್
ಬಂಟ್ವಾಳ, ಜ. 16: ತಾಲೂಕಿನ ಸಜಿಪ ಮುನ್ನೂರು ಮಲೈಬೆಟ್ಟು ನಿವಾಸಿ ಮುಹಮ್ಮದ್ ನಾಸೀರ್ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಬಂಟ್ವಾಳ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಗಾರೆ ಕೆಲಸ ಮಾಡುತ್ತ ಕುಟುಂಬದ ಆಧಾರ ಸ್ಥಂಬವಾಗಿದ್ದ ಅಮಾಯಕ ಮುಹಮ್ಮದ್ ನಾಸೀರ್ 2015ರ ಸಪ್ಟೆಂಬರ್ 7ರಂದು ರಾತ್ರಿ ಕೆಲಸ ಬಿಟ್ಟು ಅದೇ ಊರಿನ ಮುಹಮ್ಮದ್ ಮುಸ್ತಫಾ ಎಂಬವರ ಆಟೋ ರಿಕ್ಷಾದಲ್ಲಿ ಮನೆಗೆ ತೆರಲುತ್ತಿದ್ದಾಗ ಪಣೊಲಿಬೈಲ್ ಸಮೀಪ ದಾರಿ ಕೇಳುವ ನೆಪದಲ್ಲಿ ರಿಕ್ಷಾ ನಿಲ್ಲಿಸಿದ ನಾಲ್ವರು ನಾಸೀರ್ ಮತ್ತು ಮುಸ್ತಫಾರವರನ್ನು ಮರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ನಾಸಿರ್ ಸ್ಥಳದಲ್ಲೇ ಮೃತಪಟ್ಟರೆ, ಮುಹಮ್ಮದ್ ಮುಸ್ತಫಾ ತೀರ್ವ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ನಾಸೀರ್ ಹಂತಕರ ಬಂಧನಕ್ಕೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಉಗ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಾಲ್ವರು ಹಂತಕರ ಪೈಕಿ ಮೂವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದರಾದರೂ ಆರೋಪಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ ನ್ಯಾಯಲಯ ತಿಂಗಳ ಒಳಗೆ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು.
ಕೊಲೆ ಹಾಗೂ ಕೊಲೆ ಯತ್ನ ಪ್ರಕರಣದ ಆರೋಪಿಗಳಿಗೆ ತಿಂಗಳ ಒಳಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಹಾಗೂ ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಕೋರಿ ನಾಸೀರ್ ಕುಟುಂಬ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಮಂಚಿ ನಿವಾಸಿ ಅಭಿ ಯಾನೆ ಅಭಿಜಿತ್ ತಲೆಮರೆಸಿಕೊಂಡಿದ್ದಾನೆ. ಘಟನೆ ನಡೆದು ಒಂದೂವರೆ ವರ್ಷ ಕಳೆದರೂ ಆತನ ಬಂಧನವಾಗದಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.ಪೊಲೀಸರು ಶೀಘ್ರವೇ ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದ ಪಿಎಫ್‌ಐ ನಾಸೀರ್ ಕುಟುಂಬಕ್ಕೆ ಈವರೆಗೆ ಸರಕಾರದಿಂದ ಸೂಕ್ತ ಪರಿಹಾರ ದೊರೆತಿಲ್ಲ. ನ್ಯಾಯಯುಕ್ತ ಪರಿಹಾರವನ್ನು ಕೂಡಾ ಶೀಘ್ರದಲ್ಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದೆ.