×
Ad

ಸಾಮಾಜಿಕ ಮಾಧ್ಯಮಗಳ ಬಳಸಲು ಮಾಜಿ ಸೈನಿಕರಿಗೆ ಸೂಚನೆ

Update: 2017-01-16 17:26 IST

ಮಂಗಳೂರು, ಜ.16: ಮಾಜಿ ಸೈನಿಕರು ತಮ್ಮ ಸಮಸ್ಯೆಗಳನ್ನು ಮಾಜಿ ಸೈನಿಕರ ಅಸೋಶಿಯೇಶನ್‌ಗೆ ತಿಳಿಸುವುದರ ಮೂಲಕ ಬಗೆಹರಿಸಿಕೊಳ್ಳಬಹುದು. ಆಧುನಿಕ ಯುಗದ ಸಾಮಾಜಿಕ ಮಾಧ್ಯಮಗಳನ್ನು ಮಾಜಿ ಸೈನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಎಸ್.ಬಿ. ಸಾಜನ್ ತಿಳಿಸಿದರು.

ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ ಆಯೋಜಿಸಿದ್ದ ಮಾಜಿ ಸೈನಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸೈನಿಕರಿಗೆ ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಹೆಚ್ಚು ಅವಕಾಶಗಳಿದ್ದರೂ ಸರಕಾರಿ ನೌಕರಿಗೆ ದುಂಬಾಲು ಬೀಳುತ್ತಿದ್ದಾರೆ. ಹಾಗಾಗಿ ನಿವೃತ್ತಿಯಾಗುವ ಒಂದು ವರ್ಷದ ಮೊದಲು ಅಗತ್ಯ ಕೆಲಸಕ್ಕೆ ತಕ್ಕಂತೆ ಸ್ಕಿಲ್ಸ್‌ಗಳನ್ನು ಬೆಳೆಸಿಕೊಂಡಾಗ ನೌಕರಿಯನ್ನು ಸುಲಭವಾಗಿ ಪಡೆಯಬಹುದು ಎಂದು ಎಸ್.ಬಿ. ಸಾಜನ್ ಸಲಹೆ ನೀಡಿದರು.

ಭಾರತೀಯ ಸೈನ್ಯದಲ್ಲಿ ಯುವ ಜನರ ಸಂಖ್ಯೆ ಹೆಚ್ಚಿದ್ದು, ಜಿಲ್ಲೆಯಲ್ಲಿರುವ ಸೈನಿಕರಿಗೆ ಸರ್ಟಿಫಿಕೇಟ್ ಕೋರ್ಸ್, ಎಂಬಿಎ, ಬಿ.ಇ., ಮೆಡಿಕಲ್ ಡಿಗ್ರಿ ಕೋರ್ಸ್‌ಗಳನ್ನು ಮಾಡಲು ಸಲಹೆಯನ್ನು ನೀಡುವ ಅಗತ್ಯವಿದೆ. ಅಗತ್ಯ ವಿದ್ಯಾಭ್ಯಾಸ ಹೊಂದಿದ್ದಲ್ಲಿ ನಿವೃತ್ತಿ ಹೊಂದುವ ವೇಳೆಗೆ ಸುಲಭವಾಗಿ ನೌಕರಿಯನ್ನು ಪಡೆದುಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಕೆಪಿಎಸ್ಸಿ, ಮೆಡಿಕಲ್, ಎಂಬಿಎ ಹಲವಾರಿ ಕ್ಷೇತ್ರಗಳಲ್ಲಿ ಹೇರಳವಾದ ಅವಕಾಶಗಳಿದ್ದು, ಮಾಜಿ ಸೈನಿಕರಿಗೆ ಶೇ.10ರಷ್ಟು ಮೀಸಲಾತಿಯನ್ನು ಸರಕಾರ ಕಲ್ಪಿಸಿದೆ. ಹಲವು ವರ್ಷಗಳಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸೈನ್ಯಕ್ಕೆ ಸೇರಲು ಪ್ರೇರಣೆ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಮಾಜಿ ಸೈನಿಕರ ಸಮಸ್ಯೆಗಳೆನಿದ್ದರೂ ಅಸೋಶಿಯೇಶನ್‌ಗೆ ತಿಳಿಸುವ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿದರು. ಈ ಸಂದರ್ಭ ಲೆಫ್ಟಿನೆಂಟ್ ಕಮಾಂಡರ್ ಜಿ.ಪಿ. ಮಾಸ್ಕರೆನ್ಹಾಸ್, ಸುಬೇದಾರ್ ಡಿಸೋಜ, ಫ್ರಾನ್ಸಿಸ್ ಡಿ ಅಲ್ಮೇಡಾ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಸೋಶಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಐರನ್, ಕೋಶಾಧಿಕಾರಿ ಕರ್ನಲ್ ಎನ್. ಬಾಲಕೃಷ್ಣ, ಕಾರ್ಯದರ್ಶಿ ಭಗವಾನ್ ಶೆಟ್ಟಿ, ಐ.ಎನ್. ರೈ, ಶರತ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News