ಮೇಲ್ತೆನೆಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟ
ಮಂಗಳೂರು, ಜ.16: ಬ್ಯಾರಿ ಕಲಾವಿದರು ಮತ್ತು ಬರಹಗಾರರ ಒಕ್ಕೂಟವಾಗಿರುವ ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಅಧ್ಯಕ್ಷ ಆಲಿಕುಂಞಿ ಪಾರೆ ಅವರ ಮನೆಯಲ್ಲಿ ಬ್ಯಾರಿ ಸಾಹಿತ್ಯ ಸಂವಾದ ಕೂಟ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಆಲಿಕುಂಞಿ ಪಾರೆ ಕವನ ವಾಚಿಸಿದರು. ಬಳಿಕ ಬ್ಯಾರಿ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ ಮಂಡಿಸಿದರು.
ಹಿಂದಿನ ಕಾಲದಲ್ಲಿ ಬ್ಯಾರಿಗಳು ಧರಿಸುವ ವಸ್ತ್ರಕ್ಕೂ, ಸಂಸ್ಕೃತಿಗೂ ಪರಸ್ಪರ ಕೊಂಡಿ ಇತ್ತು. ಆದರೆ ಅದೆಲ್ಲವೂ ಪ್ರಸ್ತುತ ದಿನಗಳಲ್ಲಿ ಮಾಯವಾಗಿದೆ. ನಾವು ಮಕ್ಕಳ ಜೊತೆ ಮನೆಯಲ್ಲಿ ಮಾತೃಭಾಷೆಯಲ್ಲಿಯೇ ಮಾತನಾಡಿದಲ್ಲಿ ಭಾಷೆ ಉಳಿಸಬಹುದು, ಸಂಸ್ಕೃತಿ ಎನ್ನುವ ಹಳೆ ಬೇರು ಉಳಿದರೆ, ಭಾಷೆಯೂ ಉಳಿಯಬಹುದು ಎಂದು ಅವರು ಹೇಳಿದರು.
ಸಮಿತಿ ಸದಸ್ಯ ಹಂಝ ಮಲಾರ್ 2007ರಲ್ಲಿ ಬ್ಯಾರಿ ಅಕಾಡಮಿ ಘೋಷಿಸಿದ್ದ ಸಚಿವ ಎಚ್.ಎಸ್.ಮಹದೇವ ಪ್ರಸಾದ್‌ರಿಗೆ ನುಡಿನಮನ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಟಿ.ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿದರು. ಉಪಾಧ್ಯಕ್ಷ ಇಸ್ಮತ್ ಪಜೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ಕೋಶಾಧಿಕಾರಿ ಅನ್ಸಾರ್ ಇನೋಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಶೀರ್ ಅಹ್ಮದ್ ಕಿನ್ಯ, ಪ್ರಾಧ್ಯಾಪಕ ನಿಯಾಝ್ ಉಪಸ್ಥಿತರಿದ್ದರು.