×
Ad

ಜ.17: ಡಾ.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Update: 2017-01-16 18:09 IST

ಮಂಗಳೂರು, ಜ.16: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ ಜನ್ಮ ಶತಾಬ್ದಿಯ ಅಂಗವಾಗಿ ರಾಜ್ಯ ಸರಕಾರದ ಅಧಿಸೂಚನೆಯಂತೆ ದೇರೆಬೈಲ್ ಗ್ರಾಮದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾಮಟ್ಟದ ‘ಡಾ.ಅಂಬೇಡ್ಕರ್ ಭವನ’ದ ನಿರ್ಮಾಣದ ಕಾಮಗಾರಿಗೆ ಜ.17ರಂದು ಬೆಳಗ್ಗೆ 9:30ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಪಿ. ಕೇಶವ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುವುದನ್ನು ಸಹಿಸದವರು ರಾಜಕೀಯ ಪ್ರಭಾವ ಬಳಸಿ ಸದರಿ ಜಾಗದಲ್ಲಿ ಕಟ್ಟಡ ಕಟ್ಟದಂತೆ ಒತ್ತಡ ಹೇರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ ಪ್ರಯತ್ನದಿಂದಾಗಿ 12 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.

ಡಾ. ಅಂಬೇಡ್ಕರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಬರೆದ ನಗರದ ಕಾಶಿಪಟ್ಣದ ಪ್ರದೀಪ ಕಾಮತ್‌ರ ಜಾತಿವಾದಿ ನೀತಿಯನ್ನು ದಸಂಸ ಖಂಡಿಸುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪ.ಜಾತಿ ಮತ್ತು ಪ.ಪಂಗಡಗಳ ಅಭಿವೃದ್ಧಿ ಯೋಜನೆಗಳು ತೀರಾ ನಿಧಾನಗತಿಯಲ್ಲಿವೆ. ಮುಂದಿನ ಅಧಿವೇಶನದಲ್ಲಿ ಪರಿಶಿಷ್ಟರ ಅಭಿವೃದ್ಧಿ ಯೋಜನೆಗಳ ಬಗ್ಗೆ ಧ್ವನಿ ಎತ್ತಬೇಕೆಂದು ಎಲ್ಲ ಶಾಸಕರಿಗೆ ಹಕ್ಕೋತ್ತಾಯ ಸಲ್ಲಿಸಲು ದಲಿತ ಸಂಘಟನೆಗಳು ನಿರ್ಧರಿಸಲಿವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್ ಪ್ರೇಮನಾಥ ಪಿ.ಬಿ., ಪ.ಜಾ./ಪ.ಪಂ. ಮೀಸಲಾತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ವಿಶ್ವನಾಥ ಬೊಳ್ಳೂರು, ಅಖಿಲ ಭಾರತೀಯ ಪ.ಜಾ./ಪ.ಪಂ. ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯೋಗೀಶ್ ಗುರುಪುರ, ದಸಂಸ ಮುಖಂಡರಾದ ಆನಂದ್ ಸರಪಾಡಿ, ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News