×
Ad

ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಆಗ್ರಹಿಸಿ ಧರಣಿ

Update: 2017-01-16 18:48 IST

ಮಂಗಳೂರು, ಜ.16:ಸ್ಕಿಲ್ ಗೇಮ್, ಜುಗಾರಿ ಅಡ್ಡೆ, ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿತು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಸ್ಕಿಲ್‌ಗೇಮ್‌ಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿವೆ. ನಗರಪಾಲಿಕೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಇಂತಹ ಜೂಜುಕೇಂದ್ರಗಳು ರಾಜರೋಷವಾಗಿ ನಡೆಯಲು ಪೊಲೀಸರ ಶಾಮೀಲಾತಿಯೇ ಕಾರಣ. ಶಾಸಕರ ಹಿಂಬಾಲಕರು, ಬಿಜೆಪಿ ಕಾರ್ಯಕರ್ತರು ಸ್ಕಿಲ್ ಗೇಮ್, ಜುಗಾರಿ ಅಡ್ಡೆಗಳನ್ನು ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ ಸ್ಕಿಲ್ ಗೇಮ್ ನಡೆಸುತ್ತಿರುವ ಬಹುತೇಕರು ಯುವ ಕಾಂಗ್ರೆಸ್ ಪದಾಧಿಕಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಂತಹ ಮಾಫಿಯಾ ಪ್ರತಿನಿಧಿಗಳನ್ನು ಜೊತೆಯಲ್ಲಿಟ್ಟುಕೊಂಡು ಮಿಥುನ್ ರೈ ಯುವ ಕಾಂಗ್ರೆಸ್ ಕಟ್ಟಲು ಹೊರಟಿರುವುದು ವಿಪರ್ಯಾಸ ಎಂದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ನಗರದ ಕೇಂದ್ರ ಭಾಗದ ವಸತಿ ಗೃಹಗಳಲ್ಲಿ ವೇಶ್ಯಾವಾಟಿಕೆ ರಾಜಾರೋಷವಾಗಿ ನಡೆಯುತ್ತಿದೆ. ಸಾರ್ವಜನಿಕರು ಇದರ ವಿರುದ್ಧ ಠಾಣಾಧಿಕಾರಿಗೆ ದೂರು ನೀಡಿದರೆ ಹತ್ತೇ ನಿಮಿಷದಲ್ಲಿ ಮಾಫಿಯಾಗಳಿಗೆ ದೂರುದಾರರ ವಿವರವನ್ನು ರವಾನಿಸಲಾಗುತ್ತಿದೆ ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಸಿಐಟಿಯು ಮುಖಂಡ ಸಂತೋಷ್ ಶಕ್ತಿನಗರ ಮಾತಾಡಿದರು. ಹೋರಾಟದ ನೇತೃತ್ವವನ್ನು ಸಾದಿಕ್ ಕಣ್ಣೂರು, ನವೀನ್ ಕೊಂಚಾಡಿ, ರಫೀಕ್ ಹರೇಕಳ, ಮನೋಜ್ ವಾಮಂಜೂರು, ಶ್ರೀನಾಥ್ ಕುಲಾಲ್, ನೌಷಾದ್ ಬೆಂಗ್ರೆ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಮಯೂರಿ ಬೋಳಾರ, ತಸ್ರೀಫ್ ಮೂಡುಬಿದಿರೆ ಮತ್ತಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News