ನಾನೆಂದೂ ಅಂಬೇಡ್ಕರ್‌ಗೆ ಅವಮಾನ ಮಾಡಿಲ್ಲ : ಶಾಸಕಿ ಶಕುಂತಳಾ ಶೆಟ್ಟಿ ಸ್ಪಷ್ಟನೆ

Update: 2017-01-16 14:08 GMT

ಪುತ್ತೂರು,ಜ.16: ನಾನು ಅಂಬೇಡ್ಕರ್ ವಿರೋಧಿಯಲ್ಲ, ಅವರಿಗೆ ನಾನೆಂದೂ ಅವಮಾನ ಮಾಡಿಲ್ಲ.ಅಂಬೇಡ್ಕರ್ ಮೇಲಿನ ಅಭಿಮಾನದಿಂದಲೇ ನನ್ನ ಕ್ಷೇತ್ರ ವ್ಯಾಪ್ತಿಯ ಪುತ್ತೂರು ನಗರದಲ್ಲಿ ರೂ. 1.5 ಕೋಟಿ, ಉಪ್ಪಿನಂಗಡಿಯಲ್ಲಿ ರೂ. 50 ಲಕ್ಷ ಅಲ್ಲದೆ 11 ಗ್ರಾಮ ಪಂಚಾಯತ್‌ಗಳಲ್ಲಿ ತಲಾ ರೂ. 10 ಲಕ್ಷದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಅನುದಾನ ತರಿಸಿಕೊಂಡಿದ್ದೇನೆ. ಇವೆಲ್ಲವೂ ಶೋಷಿತ ಸಮುದಾಯಕ್ಕೆ ನೆರವಾಗಲಿ ಎಂಬ ಉದ್ದೇಶದಿಂದಲೇ ಮಂಜೂರು ಮಾಡಿಸಿಕೊಂಡಿದ್ದೇನೆ. ಇವೆಲ್ಲ ಗೊತ್ತಿಲ್ಲದೆ ದಲಿತ ಮುಖಂಡ ಕೂಸಪ್ಪ ಅವರು ನನ್ನನ್ನು ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಎಂದು ಹೇಳಿಕೆ ನೀಡಿದ್ದಾರೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ. ಕೂಸಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ಶಾಸಕಿ ಶಕುಂತಳಾ ಶೆಟ್ಟಿ ಅವರು ನಗರಕ್ಕೆ ಮಂಜೂರಾದ ಅಂಬೇಡ್ಕರ್ ಭವನವನ್ನು ನಗರದ ಹೊರಭಾಗದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಶಾಸಕಿ ಅವರು ದಲಿತವಿರೋಧಿ ಮತ್ತು ಅಂಬೇಡ್ಕರ್ ವಿರೋಧಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿದ ಶಾಸಕಿ ಅವರು ನಾನು ಯಾವುದೇ ದಲಿತರನ್ನು ಕಡೆಗಣಿಸಿಲ್ಲ, ಅವರಿಗೆ ಸಾಕಷ್ಟು ಯೋಜನೆಗಳನ್ನು ಮಂಜೂರುಗೊಳಿಸಿದ್ದೇನೆ. ಅಲ್ಲದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರಾಜ್ಯದಲ್ಲಿಯೇ ಅತೀ ಹೆಚ್ಚು ಅನುದಾನ ಪಡೆದುಕೊಂಡಿದ್ದೇನೆ. ಆದರೆ ಅಧಿಕಾರಿಗಳು ಸೂಕ್ತ ಸ್ಥಳವನ್ನು ಮಂಜೂರುಗೊಳಿಸಲು ವಿಫಲವಾಗಿರುವ ಕಾರಣ ಅನುದಾನ ಹಿಂದಕ್ಕೆ ಹೋಗುವ ಸ್ಥಿತಿಯಲ್ಲಿದೆ. ಅದಕ್ಕಾಗಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇನೆ ಎಂದರು.

ಕ್ಷೇತ್ರದ ವಿವಿಧ ಭಾಗಗಳಲ್ಲಿ ದಲಿತ ವರ್ಗದ ಅಭಿವೃದ್ಧಿಗಾಗಿ ರೂ. 43. 91 ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದು, ಲೋಕೋಪಯೋಗಿ ಇಲಾಖೆಯಿಂದ 1148.48, ಸಮಾಜ ಕಲ್ಯಾಣ ಇಲಾಖೆಯಿಂದ 680.00 ಲಕ್ಷ. ಅಂಬೇಡ್ಕರ್ ಭವನ ಕಟ್ಟಡ ಕಮಗಾರಿ 310.00 ಲಕ್ಷ. ಮಲೆನಾಡು ಅಭಿವೃದ್ಧಿ ರಸ್ತೆ ಕಾಮಗಾರಿ 40.60 ಲಕ್ಷ. ನಮ್ಮ ಗ್ರಾಮ ನಮ್ಮ ರಸ್ತೆ 280.50 ಲಕ್ಷ. ಸಣ್ಣ ನೀರಾವರಿ ಇಲಾಖೆ ವೈಯುಕ್ತಿಕ ಕೊಳವೆ ಬಾವಿ 280.00 ಲಕ್ಷ. ಶಾಸಕರ ಪ್ರದೇಶಾಭಿವೃದ್ಧಿ ರಸ್ತೆ ಕಾಮಗಾರಿ 146.00 ಲಕ್ಷ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕೊಳವೆ ಬಾವಿ ಹಾಗೂ ಸ್ವಯಂ ಉದ್ಯೋಗ- 720. 00 ಲಕ್ಷ, ಕೊರಗರ ಅಭಿವೃದ್ಧಿ ರಸ್ತೆ ಕಾಮಗಾರಿ 159.00 ಲಕ್ಷ, ಗಡಿನಾಡು ಪ್ರದೇಶಾಭಿವೃದ್ಧಿ ರಸ್ತೆ ಕಾಮಗಾರಿ 31.00 ಲಕ್ಷ , ಸಮಾಜ ಕಲ್ಯಾಣ ಕಚೇರಿ 74 ಲಕ್ಷ ಹಾಗೂ ಸ್ಮಶಾನ ಅಭಿವೃದ್ಧಿ ಯೋಜನೆ 20.00 ಲಕ್ಷ ರೂ ಗಳನ್ನು ಮಂಜೂರು ಮಾಡಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News