ನೀರಿಗೆ ಬಿದ್ದು ನಾಲ್ವರ ಮೃತ್ಯು: ಸಮಗ್ರ ತನಿಖೆಗೆ ಆಗ್ರಹ
ಉಡುಪಿ, ಜ.16: ಇತ್ತೀಚೆಗೆ ಕಾಜೂರು ದರ್ಗಾಕ್ಕೆ ತೆರಳಿ ಹಿಂತಿರುಗುವ ಸಂದರ್ಭ ಕಾಪು ಮಲ್ಲಾರು ಗ್ರಾಮದ ಒಂದೇ ಕುಟುಂಬದ 4 ಮಂದಿ ನೀರಿಗೆ ಬಿದ್ದು ಮೃತಪಟ್ಟ ಘಟನೆಯ ಬಗ್ಗೆ ಸಂಶಯಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಾವಿಗೆ ಕಾರಣವಾದ ಅಂಶವನ್ನು ಬಹಿರಂಗ ಪಡಿಸ ಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಂ.ಪಿ ಮೊದಿನಬ್ಬ ರಾಜ್ಯ ಗೃಹ ಸಚಿವರನ್ನು ಆಗ್ರಹಿಸಿದ್ದಾರೆ.
ಮೃತ ಕುಟುಂಬದ ಮಲ್ಲಾರಿನ ಮನೆಗೆ ಇಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಪೂರ್ ಅವರೊಂದಿಗೆ ಭೇಟಿ ನೀಡಿದ ಅವರು ದುಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೃತ ಕುಟುಂಬದ ಸದಸ್ಯರು ನೀಡಿದ ಹಾಗೂ ಈಗಾಗಲೆ ದೊರಕಿದ ಮಾಹಿತಿಗಳಂತೆ 4 ಮಂದಿಯ ಸಾವಿಗೆ ಕಾರಣವಾದ ಕೆರೆಯಲ್ಲಿ ವಿದ್ಯುತ್ ಪಂಪು ಅಳವಡಿಸಲಾಗಿದ್ದು, ಇದರಿಂದ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಇವರ ಸಾವು ಸಂಭವಿಸಿರುವ ಬಗ್ಗೆ ಅನುಮಾನಗಳಿವೆ. ಮನುಷ್ಯ ಮುಳುಗಿ ಸಾಯುವ ಪ್ರಮಾಣದಲ್ಲಿ ಇಲ್ಲಿ ನೀರು ಇರಲಿಲ್ಲ ಎಂಬುದು ಕೂಡ ಸಂಶಯಕ್ಕೆಡೆ ಮಾಡಿದೆ.
ಆದ್ದರಿಂದ ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸ ಬೇಕೆಂದು, ಸತ್ಯಾಂಶವನ್ನು ಬಹಿರಂಗ ಪಡಿಸಿ ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುಶ್ತಾಕ್ ಅಹ್ಮದ್, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಚ್. ಅಬ್ದುಲ್ಲ, ಪುರಸಭಾ ಸದಸ್ಯ ಇಮ್ರಾನ್, ಸ್ಥಳೀಯರಾದ ದಿವಾಕರ ಶೆಟ್ಟಿ, ಆರಿಫ್ ಮುಹಮ್ಮದ್, ಹಮೀದ್, ರೊನಾಲ್ಡ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.