ಹರಿಕಥೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ಅಗತ್ಯ: ಪೇಜಾವರ ಶ್ರೀ
ಉಡುಪಿ, ಜ.16: ಹರಿಕಥೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಪ್ರತಿಭೆ ಬೆಳೆಸುವ ಕಾರ್ಯ ಮಾಡಬೇಕು. ಇದರಿಂದ ಮಕ್ಕಳಲ್ಲಿ ಪುರಾಣ ಕಥೆಗಳ ಅರಿವು, ಸಭಾ ಕಂಪನ ದೂರ ಹಾಗೂ ಎಲ್ಲರೊಂದಿಗೆ ಬೆರೆತು ಮಾತನಾಡುವ ಕಲೆ ವೃದ್ಧಿಸಲು ಸಾಧ್ಯ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಕಾರ್ಕಳ ಹಂಡೆ ದಾಸ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಆಯೋಜಿಸ ಲಾಗಿರುವ ಐದು ದಿನಗಳ ಹರಿಕಥಾ ಪಂಚಾಹ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಜಾನಪದ ವಿವಿಯ ಸಿಂಡಿಕೇಟ್ ಸದಸ್ಯ, ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್. ಎ.ಕೃಷ್ಣಯ್ಯ ಮಾತನಾಡಿ, ಡಚ್ ವಿದ್ವಾಂಸ ಪ್ರೊ.ಅರ್ನಾಲ್ಸ್ ಬಾಕೆ ದೇಸಿ ಸಂಗೀತದ ಅಧ್ಯಯನ ನಡೆಸಲು ಭಾರತಕ್ಕೆ 1938ರಲ್ಲಿ ಬಂದಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕರಾವಳಿಗೆ ಕಳುಹಿಸಿದ್ದರು. ಆಗ ಪುತ್ತೂರಿ ನಲ್ಲಿದ್ದ ಶಿವರಾಮ ಕಾರಂತರು ಬಾಕೆಗೆ ಸಹಕಾರ ನೀಡಿದ್ದರು. ಆಗ ಹಂಡೆ ಶ್ರೀಪಾದದಾಸರ ಹರಿಸಂಕೀರ್ಥನಾ ಕಥೆ ಉತ್ತರ ಗೋಗ್ರಹಣ ಹರಿಕಥೆಯನ್ನು ವೈರ್ ರೆಕಾರ್ಡಿಂಗ್ ಮೂಲಕ ದಾಖಲಿಸಲಾಗಿತ್ತು. ಇದೀಗ ಅದನ್ನು ಪುನರ್ ಅಧ್ಯಯನ ಮಾಡಬೇಕಾಗಿದೆ ಎಂದರು.
ಉಡುಪಿಯಲ್ಲಿ ದೇಶಿ ಸಂಕೀರ್ತನೆಗೆ ಸಂಬಂಧಪಟ್ಟ ವಿದ್ಯಾಲಯವನ್ನು ಸ್ಥಾಪಿಸಬೇಕಾದ ಅಗತ್ಯವಿದ್ದು, ಈ ಮೂಲಕ ಈ ದೇಶಿ ಸಂಗೀತದ ಅಧ್ಯಯನ ಆಗಬೇಕಾಗಿದೆ. ಹಂಡೆ ಶ್ರೀಪಾದದಾಸರ ಕೃತಿಗಳ ಡಿಜಿಟಲೀ ಕರಣ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪೇಜಾವರ ಕಿರಿಯ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತ ನಾಡಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ಶ್ರೀಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ವಹಿಸಿದ್ದರು. ರಾಘವೇಂದ್ರ ಕೆ.ಭಟ್ ಉಡುಪಿ ಉಪಸ್ಥಿತರಿದ್ದರು.
ಹಂಡೆ ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಅನಂತ ಕಷ್ಣಾಚಾರ್ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ನೆಲ್ಲಿ ಕಾರ್ಯಕ್ರಮ ನಿರೂಪಿಸಿದರು. ನಂತರ ಉಡುಪಿ ಪ್ರಹ್ಲಾದ ಗುರುಕುಲದ ವಿದ್ಯಾರ್ಥಿ ಶ್ರೀನಿವಾಸ ಅವರಿಂದ ಭಕ್ತ ಮಾರ್ಕಂಡೇಯ ಕಥಾ ಭಾಗದ ಹರಿಕಥೆ ನಡೆಯಿತು.