×
Ad

ಕಾನೂನನ್ನು ಕೈಗೆತ್ತಿಕೊಂಡ ಕಾಂಗ್ರೆಸ್: ಬಿಜೆಪಿ ಆರೋಪ

Update: 2017-01-16 20:30 IST

ಮಂಗಳೂರು, ಜ.16: ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಕಾಂಗ್ರೆಸ್ ಜನಪ್ರತಿನಿಧಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಜ.14ರಂದು ಎಪಿಎಂಸಿ ಚುನಾವಣಾ ಮತಎಣಿಕೆಯ ಬಳಿಕ ಮೂಡುಬಿದಿರೆಯಲ್ಲಿ ಪರಾಭವಗೊಂಡ ಬಿಜೆಪಿ ಅಭ್ಯರ್ಥಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆಯು ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ದೂರಿದ್ದಾರೆ.

ಸೋಮವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜ.14ರಂದು ವಿಜೇತ ಕಾಂಗ್ರೆಸ್ ಅಭ್ಯರ್ಥಿ ಚಂದ್ರಹಾಸ ಸನಿಲ್ ಮೂಡುಬಿದಿರೆಯಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಿದ್ದಾರೆ. ಅದಕ್ಕೆ ಪೊಲೀಸರಿಂದ ಪರವಾನಿಗೆ ಪಡೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ಬಿಜೆಪಿಯ ವಲೇರಿಯನ್ ಕುಟಿನ್ಹೊ ಮೇಲೆ ಕಾಂಗ್ರೆಸಿಗರು ಹಲ್ಲೆ ನಡೆಸಿ ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ವಲೇರಿಯನ್ ಮೇಲೆ ಹಲ್ಲೆ ನಡೆಸಿದ ಚೇತನ್‌ನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆತನನ್ನು ಬಂಧಿಸಿಲ್ಲ. ವಿಜಯೋತ್ಸವ ಸಂದರ್ಭ ಸ್ಥಳದಲ್ಲಿರದ ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಸುಚರಿತ ಶೆಟ್ಟಿ, ಈಶ್ವರ ಕಟೀಲು, ಜಗದೀಶ್ ಅಧಿಕಾರಿ, ಡಾ.ಭರತ್ ಶೆಟ್ಟಿ ಮೊದಲಾದವರ ಮೇಲೆ ಸೆಕ್ಷನ್ 307ರ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಮಠಂದೂರು ಆರೋಪಿಸಿದರಲ್ಲದೆ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸದಿದ್ದರೆ ಮತ್ತು ಬಿಜೆಪಿಗರ ವಿರುದ್ಧ ದಾಖಲಿಸಿರುವ ಪ್ರಕರಣ ಕೈಬಿಡದಿದ್ದರೆ ಜ.19ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್, ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಮುಖಂಡರಾದ ಜಿತೇಂದ್ರ ಕೊಟ್ಟಾರಿ ಮತ್ತು ಜೋಯ್ ಎಸ್.ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News