×
Ad

ಹರೇಕಳ : ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಆಶ್ರಯದಲ್ಲಿ ಸಾಮೂಹಿಕ ವಿವಾಹ

Update: 2017-01-16 20:47 IST

ಕೊಣಾಜೆ,ಜ.16: ಸಮುದಾಯ ಎಂದು ಸುಶಿಕ್ಷಿತವಾಗುತ್ತದೋ ಅಂದು ಅಭಿವೃದ್ಧಿ ಕಾಣಲು ಸಾಧ್ಯ, ಈ ನಿಟ್ಟಿನಲ್ಲಿ ಸಂಘಟನೆ ಶೈಕ್ಷಣಿಕ ಕ್ರಾಂತಿಯತ್ತ ಹೆಜ್ಜೆ ಇಟ್ಟಿದೆ. ಧಾರ್ಮಿಕ ಗುರುಗಳ ನೇತೃತ್ವದಲ್ಲಿ ಬಡ, ನಿರ್ಗತಿಕರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕೈ ಜೋಡಿಸುವ ಮೂಲಕ ಸಮುದಾಯದ ಮೇಲಿರುವ ಪ್ರೀತಿ ತೋರಿಸಿ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಕೆ.ಎಂ.ಶಾಫಿ ಸಅದಿ ಬೆಂಗಳೂರು ಅಭಿಪ್ರಾಯಪಟ್ಟರು.

ಹರೇಕಳ ಫರೀದ್‌ನಗರ ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಜಂಟಿ ಆಶ್ರಯದಲ್ಲಿ ಸೋಮವಾರ ಆರ್‌ಜೆಎಂ ವಠಾರ, ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ಆದರ್ಶ ಸಾಮೂಹಿಕ ವಿವಾಹ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

  ಸಂಘಟನೆ ಅನಾಥರಿಗೆ ರಕ್ಷಣೆ, ಬಡವರು, ದಾರಿದ್ರ್ಯದಿಂದ ಜೀವಿಸುತ್ತಿರುವವರಿಗೆ ಸಾಂತ್ವನ, ಬಡ ಹೆಣ್ಮಕ್ಕಳಿಗೆ ವಿವಾಹ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅದೊಂದು ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿದೆ. ಸಂಘಟನೆಯ ಕರ್ಯಕರ್ತರು ಎಂದಿಗೂ ಭಯೋತ್ಪಾದನೆ, ಉಗ್ರವಾದಕ್ಕೆ ಬೆಂಬಲಿಸುವ ಕಾಯಕ ಮಾಡಿಲ್ಲ, ಈ ವಿಚಾರದಲ್ಲಿ ಯಾರ ಮೇಲೂ ಕೇಸುಗಳಿಲ್ಲ ಎಂದು ಸಭಾ ಕಾರ್ಯಕ್ರಮ ಉದ್ಘಾಟಿಸಿದ ಎಸ್‌ವೈಎಸ್ ರಾಜ್ಯ ಪ್ರ.ಕಾರ್ಯದರ್ಶಿ ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು ತಿಳಿಸಿದರು.

ಜಿಲ್ಲಾ ಪ್ರ.ಕಾರ್ಯದಶಿ ಸಿದ್ದೀಕ್ ಸಖಾಫಿ ಮಾತನಾಡಿ, ವರದಕ್ಷಿಣೆ ಪಿಡುಗು ಎಲ್ಲಾ ಸಮುದಾಯದಲ್ಲಿ ಗಂಭೀರ ಸಮಸ್ಯೆಯಾಗಿದ್ದು ಇದರ ವಿರುದ್ಧ ಸಮರ ಸಾರಿದ ಮೊದಲ ಸಂಘಟನೆ ಎಸ್‌ವೈಎಸ್ ಆಗಿದೆ, ರಾಜ್ಯಾದ್ಯಂತ ಸಾಮೂಹಿಕ ವಿವಾಹ ಮಾಡುತ್ತಾ ಬಂದಿದ್ದು ಇಂತಹ ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧ್ವಾಂಸರು, ಗಣ್ಯರ ಮುಂದೆ ದಾಂಪತ್ಯ ಪ್ರವೇಶಿಸುವುದು ಅದೃಷ್ಟ ಎಂದು ಅಭಿಪ್ರಾಯಪಟ್ಟರು.

 ಆದೂರು ಅಶ್ರಫ್ ತಂಙಳ್ ನೇತೃತ್ವದಲ್ಲಿ ನಿಖಾ ನಡೆಯಿತು. ಫರೀದ್‌ನಗರ ಮಸೀದಿ ಅಧ್ಯಕ್ಷ ಅಸ್ಸಯ್ಯದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೋಸಿ ಅಧ್ಯಕ್ಷತೆ ವಹಿಸಿದ್ದರು. ಎಲ್ಯಾರ್ ಪದವು ಚರ್ಚ್ ಉಪಾಧ್ಯಕ್ಷ ಎಡ್ವರ್ಡ್ ಮಥಾಯಿಸ್, ಉದ್ಯಮಿ ಭರತ್‌ರಾಜ್ ಶೆಟ್ಟಿ ಪಜೀರುಗುತ್ತು, ಹಸನ್ ಸಖಾಫಿ ಕುಪ್ಪೆಟ್ಟಿ, ಅಬ್ದುಲ್ ಮಜೀದ್ ರಜ್‌ಕಮಲ್, ಮುಹಮ್ಮದ್ ಮುಸ್ತಫಾ ದೇರಿಕಟ್ಟೆ, ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಹರೇಕಳ ಗ್ರಾ.ಪಂ.ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಬದ್ರುದ್ದೀನ್, ಅಬ್ದುಲ್ ಸತ್ತಾರ್, ಪತ್ರಕರ್ತ ವಿದ್ಯಾಧರ್ ಶೆಟ್ಟಿ, ಶಾಹುಲ್ ಹಮೀದ್ ಫರೀದ್ ನಗರ, ಬಿ.ಖಾಲಿದ್, ಫಾರೂಕ್ ಬಿ.ಎಚ್ ಸಹಿತ ಹಲವು ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಮಹಮ್ಮದ್ ಮುಸ್ತಫಾ ಪಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ವೈಎಸ್ ಪ್ರ.ಕಾರ್ಯದರ್ಶಿ ಫೈಝಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News