×
Ad

ಶಂಕಿತ ಭಯೋತ್ಪಾದಕ ಇಂದ್ರೇಶ್ ಕುಮಾರ್ ಕಾರ್ಯಕ್ರಮಕ್ಕೆ ಪೋಲೀಸರ ಸಹಕಾರದ ಬಗ್ಗೆ ತನಿಖೆಯಾಗಲಿ : ಸುಹೈಲ್ ಕಂದಕ್

Update: 2017-01-16 21:13 IST

ಸಂಘಪರಿವಾರದ ಪೋಷಕ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ( ಎಂ.ಆರ್.ಎಂ) ನ ನಾಯಕ , ಸ್ಫೋಟ ಪ್ರಕರಣಗಳಲ್ಲಿ ಆರೋಪ ಕೇಳಿ ಬಂದಿರುವ  ಶಂಕಿತ ಭಯೋತ್ಪಾದಕ ಇಂದ್ರೇಶ್ ಕುಮಾರ್ ಹಾಗು ಮಂಗಳೂರಿನ ಪೋಲೀಸರ ನಡುವೆ ಯಾವ ನಂಟಿದೆ ಎಂದು ಜನರಿಗೆ ಗೊತ್ತಾಗಬೇಕಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಹೇಳಿದ್ದಾರೆ.


ಮುಸ್ಲಿಂ ರಾಷ್ಟ್ರೀಯ ಮಂಚ್ ನ  ಕಾರ್ಯಚಟುವಟಿಕೆಗಳು ಮುಸ್ಲಿಂ ಸಮುದಾಯದ ನಡುವೆ ಒಡಕನ್ನು ಉಂಟುಮಾಡುವ ಮೂಲಕ, ಮುಸ್ಲಿಂ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಡಿಸುವಂತಹ ವ್ಯವಸ್ಥಿತ ಷಡ್ಯಂತ್ರವು ನಡೆಯುತ್ತಿದೆ.ದೂರದ ಉತ್ತರ ಪ್ರದೇಶ, ಮಧ್ಯಪ್ರದೇಶಗಳಂತಹ ರಾಜ್ಯಗಳಲ್ಲಿ ವ್ಯಾಪಕವಾಗಿ ಸಮುದಾಯದ ನಡುವೆ ಭಿನ್ನತೆಯನ್ನು ಪಸರಿಸುತ್ತಿದ್ದ ಮುಸ್ಲಿಂ ರಾಷ್ಟ್ರೀಯ ಮಂಚ್, ಇಂದ್ರೇಶ್ ಕುಮಾರ್ ನ ಮೂಲಕ ಕರಾವಳಿ ಪ್ರದೇಶಗಳಲ್ಲೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಅದಕ್ಕೆ ಇಲ್ಲಿನ ಪೋಲೀಸ್ ಅಧಿಕಾರಿಗಳೇ ಬೆಂಗಾವಲಾಗಿ ನಿಂತಿರುವುದು ಆಶ್ಚರ್ಯವನ್ನು ಹುಟ್ಟಿಸುತ್ತಿದೆ ಎಂದು ಸುಹೈಲ್ ಆರೋಪಿಸಿದ್ದಾರೆ.

ಕರಾವಳಿಯ ಮುಸ್ಲಿಂ ಸಮುದಾಯದ ನಡುವೆ ಭಿನ್ನತೆಯನ್ನು ಸೃಷ್ಟಿಸಿ ಲಾಭ ಪಡೆಯುವ ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರಕ್ಕೆ ಪೋಲೀಸ್ ಅಧಿಕಾರಿಗಳು ಸಂಘಪರಿವಾರದ ಕಾರ್ಯಕರ್ತರಂತೆ ವರ್ತಿಸುವುದನ್ನು  ಗೃಹಮಂತ್ರಿಯವರು ಪ್ರಶ್ನಿಸಿ, ಪೊಲೀಸ್ ಇಲಾಖೆಯು ಸಂಘಪರಿವಾರದ ಅನತಿಯಂತೆ ಕಾರ್ಯಾಚರಿಸುವುದನ್ನು ಇಲ್ಲವಾಗಿಸಬೇಕೆಂದು ಸುಹೈಲ್ ಕಂದಕ್   ಆಗ್ರಹಿಸಿದ್ದಾರೆ.

ಮೊನ್ನೆ ನಡೆದ ಮುಸ್ಲಿಮ್ ರಾಷ್ಟ್ರೀಯ ಮಂಚ್  ಪ್ರಾಯೋಜಿತ ಈ  ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತು ಅದರ ಯಶಸ್ವಿಯಾಗಲು  ಸಂಪೂರ್ಣವಾಗಿ ಸಹಕರಿಸಿದ್ದು  ಜಿಲ್ಲೆಯ  ಪೋಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಾಗಿರುತ್ತಾರೆ.  ಕಾರ್ಯಕ್ರಮದ ಪ್ರಾಯೋಜಕರು  ಭಾಗವಹಿಸುವ ಅತಿಥಿಗಳು ಯಾರೆಂದು ತಿಳಿಸದೆ   ಗೌಪ್ಯವಾಗಿರಿಸಿ  ಜಿಲ್ಲೆಯ ಕೆಲ ಪ್ರಮುಖ ಸಂಘ ಸಂಸ್ಥೆಗಳಿಗೆ ಮತ್ತು ಮುಖ್ಯಸ್ಥರಿಗೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ನೀಡಿದ್ದು ಹಾಗೂ  ಕ್ರೈಂ ವಿಭಾಗದ ಡಿಸಿಪಿಯಾಗಿರುವ  ಸಂಜೀವ್ ಪಾಟೀಲ್, ಹಾಗೇಯೇ  ಖಾಝಿ ತ್ವಾಕಾ ಉಸ್ತಾದರನ್ನು ಪೋಲೀಸ್ ಜೀಪಿನಲ್ಲಿ ಕರೆದುಕೊಂಡು ಬಂದು ಸ್ವಾಗತಿಸಿದ್ದು ಬಂದರ್ ಪೋಲೀಸ್ ಠಾಣೆಯ ಇನ್ಸ್'ಪೆಕ್ಟರ್  ಶಾಂತರಾಂ ಆಗಿರುತ್ತಾರೆ.    ಡಿಸಿಪಿ ಶಾಂತರಾಜು ಅವರು ಉಳ್ಳಾಲ ದರ್ಗಾ ಕಮಿಟಿ ಅಧ್ಯಕ್ಷ ರಶೀದ್ ಹಾಜಿಗೆ ಆಮಂತ್ರಣ ಪತ್ರ ನೀಡಲು ಹೋಗಿದ್ದು ಸರಕಾರ ನೀಡಿದ್ದ ತನ್ನ ಪೋಲೀಸ್ ವಾಹನದಲ್ಲಿ  ಎಂದು ಆರೋಪಿಸಿರುವ ಸುಹೈಲ್ ಈ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿದೇ ಇದನ್ನೆಲ್ಲಾ ಮಾಡಿದ್ದಾರೆಯೇ ಎನ್ನುವ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು.

ಕರಾವಳಿ ಪ್ರದೇಶದಲ್ಲಿ  ಒಗ್ಗಟ್ಟಿನಲ್ಲಿರುವ ಮುಸ್ಲಿಮರನ್ನು ಎಂ.ಆರ್.ಎಂ ನ ಕಾರ್ಯಕ್ರಮದ ಮೂಲಕ ವಿಂಗಡಿಸಿ, ಅವರನ್ನು ಪರಸ್ಪರ ಕಚ್ಚಾಡಿಸುವಂತೆ ಮಾಡುವ ಸಂಘಪರಿವಾರದ ಪೋಷಕ ಸಂಘಟನೆಯ ವ್ಯವಸ್ಥಿತ ಷಡ್ಯಂತ್ರಕ್ಕೆ ಪೊಲೀಸ್ ಇಲಾಖೆಯು ತಮ್ಮ ಸರ್ಕಾರಿ ವ್ಯವಸ್ಥೆಯನ್ನು ಬಳಸಿರುವುದು ಅಧಿಕಾರದ ದುರಪಯೋಗವಾಗಿದೆ. ರಾಜ್ಯದ ಗೃಹ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಮಕ್ಕಾ ಮಸೀದಿ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಆರೋಪಿ ಇಂದ್ರೇಶ್ ಕುಮಾರ್ ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟಿಸಲು ನೆರವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News