ತೈವಾನ್ ಬಗ್ಗೆ ಟ್ರಂಪ್ ಕ್ಯಾತೆ ತೆಗೆದಲ್ಲಿ ಚೀನಾ ಸುಮ್ಮನೆ ಕೂರದು :ಚೀನಿ ದೈನಿಕಗಳ ಮುನ್ನೆಚ್ಚರಿಕೆ
ಶಾಂಘಾ,ಜ.16: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ತೈವಾನ್‌ನ ಸ್ವಯಂಆಡಳಿತದ ಕುರಿತ ವಿವಾದದಲ್ಲಿ ಚೀನವನ್ನು ಉದ್ರೇಕಿಸುವುದನ್ನು ಮುಂದುವರಿಸಿದಲ್ಲಿ ಬೀಜಿಂಗ್ ಸುಮ್ಮನೆ ಕೈಕಟ್ಟಿಕೂರದು ಎಂದು ಎರಡು ಪ್ರಮುಖ ಚೀನಿ ದಿನಪತ್ರಿಕೆಗಳು ಎಚ್ಚರಿಕೆ ನೀಡಿವೆ.
ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ‘ಏಕ ಚೀನಾ’ ನೀತಿಯು ಚರ್ಚಾಸ್ಪದ ವಿಷಯವಾಗಿದೆ ಎಂದು ಹೇಳಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಚೀನಿ ವಿದೇಶಾಂಗ ಸಚಿವಾಲಯವು, ‘ಏಕ ಚೀನಾ’ ನೀತಿಯು ಚೀನಾ-ಅಮೆರಿಕ ಬಾಂಧವ್ಯಕ್ಕೆ ತಳಹದಿಯಾಗಿದ್ದು, ಅದರಲ್ಲಿ ಚರ್ಚೆಗೆ ಆಸ್ಪದವೇ ಇಲ್ಲವೆಂದು ಹೇಳಿದೆ.
ಟ್ರಂಪ್ ಅವರು ಕಳೆದ ತಿಂಗಳು ತೈವಾನ್ ಅಧ್ಯಕ್ಷ ತ್ಸಾಯಿ ಇಂಗ್-ವೆನ್ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ಅಲ್ಲಿನ ಆಡಳಿತಕ್ಕೆ ಮನ್ನಣೆ ನೀಡಿರುವುದು ಚೀನಾವನ್ನು ಕೆರಳಿಸಿತ್ತು. ತೈವಾನ್, ತನ್ನ ಅವಿಭಾಜ್ಯ ಅಂಗವೆಂದು ಚೀನಾ ಪ್ರತಿಪಾದಿಸುತ್ತಿದೆ.
‘‘ ಒಂದು ವೇಳೆ ಟ್ರಂಪ್, ಅಧಿಕಾರ ಸ್ವೀಕರಿಸಿದ ಬಳಿಕ ಇದೇ ತಂತ್ರವನ್ನು ಅನುಸರಿಸಿದಲ್ಲಿ, ಪರಸ್ಪರ ಉಗ್ರ ಹಾಗೂ ಹಾನಿಕಾರಕವಾದ ವರ್ತನೆಗಳು ನಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆಗ ಬೀಜಿಂಗ್‌ಗೆ ತನ್ನ ‘ಕೈಗವಸು’ಗಳನ್ನು ತೆಗೆಯದೆ ಬೇರೆ ಆಯ್ಕೆಯೇ ಇಲ್ಲವೆಂದು ಇಂಗ್ಲೀಷ್ ದಿನಪತ್ರಿಕೆ ಚೀನಾ ಡೈಲಿ ಹೇಳಿದೆ.
ಚೀನಾದ ಸರಕಾರಿ ಸ್ವಾಮ್ಯದ ಇನ್ನೊಂದು ಪ್ರಭಾವಿ ಟಾಬ್ಲಾಯ್ಡಾ ಗ್ಲೋಬಲ್ ಟೈಮ್ಸ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಏಕ ಚೀನಾ ನೀತಿಯನ್ನು ಹಾಳುಗೆಡಹುವ ಟ್ರಂಪ್‌ರ ಪ್ರಯತ್ನದ ವಿರುದ್ಧ ಬಲವಾದ ಪ್ರತಿಕ್ರಮಗಳನ್ನು ಬೀಜಿಂಗ್ ಕೈಗೊಳ್ಳಲಿದೆಯೆಂದು ಅದು ಎಚ್ಚರಿಕೆ ನೀಡಿದೆ.
ಚೀನಾದ ಮುಖ್ಯಭೂಭಾಗವು ತೈವಾನ್‌ನ ಪುನರ್‌ಏಕೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ ಹಾಗೂ ತೈವಾನ್‌ನ ಸ್ವಾತಂತ್ರವನ್ನು ಪ್ರತಿಪಾದಿಸುವವರ ವಿರುದ್ಧ ನಿರ್ದಯವಾಗಿ ಹೋರಾಡಲಿದೆಯೆಂದು’’ ಪತ್ರಿಕೆಯು ಸಂಪಾದಕೀಯದಲ್ಲಿ ತಿಳಿಸಿದೆ.