ಗಾಂಜಾ ವ್ಯಸನಿಗಳಿಗೆ ಕಡಿವಾಣ ಅನಿವಾರ್ಯ: ಯು.ಟಿ.ಖಾದರ್
ಉಳ್ಳಾಲ,ಜ.16: ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಅವರ ಕಾರನ್ನು ಪುಡಿಗೈದ ಪ್ರಕರಣದ ವಿರುದ್ಧ ಕಿಡಿಕಾರಿರುವ ಸಚಿವ ಯು.ಟಿ.ಖಾದರ್ ಇಂತಹ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.
ತನ್ನ ಮನೆ ಮುಂದೆ ನಿಲ್ಲಿಸಲಾಗಿದ್ದ ಫಾರೂಕ್ ಅವರ ಕಾರನ್ನು ಬುಧವಾರ ರಾತ್ರಿ ಗಾಂಜಾ ವ್ಯಸನಿಗಳು ಪುಡಿಮಾಡಿದ್ದರು. ಹಫ್ತಾ ನೀಡದಂತೆ ತಡೆದಿದ್ದು ಹಾಗೂ ಗಾಂಜಾ ವ್ಯಸನಿಗಳ ಅಡ್ಡೆಯಂತಿದ್ದ ಸ್ಥಳೀಯ ಪ್ರದೇಶದಲ್ಲಿ ವಿದ್ಯುತ್ ದೀಪ ಅಳವಡಿಸಿದ್ದರಿಂದ ಹತಾಶರಾಗಿ ಕೃತ್ಯ ಎಸಗಿರುವುದು ಸಾಬೀತಾಗಿದ್ದು, ಘಟನೆ ನಡೆದ ಬಳಿಕ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಉಳ್ಳಾಲದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಗಾಂಜಾ ವ್ಯಸನಿಗಳಿಗೆ ಕಡಿವಾಣ ಅನಿವಾರ್ಯ, ಅಲ್ಲದೆ ಇತಿಹಾಸ ಪ್ರಸಿದ್ಧ ದರ್ಗಾಕ್ಕೆ ಬರುವ ಪ್ರವಾಸಿಗರ ಹಿತ ಕಾಪಾಡಬೇಕಾಗಿದೆ, ಈ ನಿಟ್ಟಿನಲ್ಲಿ ದರ್ಗಾ ಮುಂಭಾಗದಲ್ಲಿ ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸಬೇಕೆನ್ನುವ ಸಾರ್ವಜನಿಕರ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಈ ಸಂದರ್ಭ ಫಾರೂಕ್ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ರಫೀಕ್ ಅಂಬ್ಲಮೊಗರು, ಗಣೇಶ್ ತಲಪಾಡಿ, ಉಸ್ಮಾನ್ ಕಲ್ಲಾಪು, ಮೊಹಮ್ಮದ್ ಲಿಬ್ಝೆತ್, ಫೈರೋಜ್ ಕೋಡಿ, ದರ್ಗಾ ಚಾರಿಟೇಬಲ್ ಟ್ರಸ್ಟಿಗಳಾದ ಅಯೂಬ್, ಜಮಾಲ್ ಬಾರ್ಲಿ, ಕೌನ್ಸಿಲರ್ ಮುಸ್ತಫಾ ಅಬ್ದುಲ್ಲಾ, ನಝೀರ್ ಬಾರ್ಲಿ ಮೊದಲಾದವರು ಉಪಸ್ಥಿತರಿದ್ದರು.